ADVERTISEMENT

ಎಚ್‌ಡಿಕೆ, ಬಂಗಾರಪ್ಪ ಅವರಿಂದ ಅಪಕೀರ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2011, 9:45 IST
Last Updated 22 ನವೆಂಬರ್ 2011, 9:45 IST
ಎಚ್‌ಡಿಕೆ, ಬಂಗಾರಪ್ಪ ಅವರಿಂದ ಅಪಕೀರ್ತಿ
ಎಚ್‌ಡಿಕೆ, ಬಂಗಾರಪ್ಪ ಅವರಿಂದ ಅಪಕೀರ್ತಿ   

ತೀರ್ಥಹಳ್ಳಿ: ಕರ್ನಾಟಕದ ರಾಜಕಾರಣಕ್ಕೆ ಅಪಕೀರ್ತಿ ಬಂದಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಹಾಗೂ ಎಚ್.ಡಿ.  ಕುಮಾರಸ್ವಾಮಿ ಅವರೇ ಕಾರಣರು ಎಂದು ರಾಜ್ಯ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಹೇಳಿದರು.

ಸೋಮವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ನಡೆದ `ಚಿಂತನ ಮಂಥನ~ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಎಂದಿಗೂ ಬಿಜೆಪಿಯೊಂದಿಗೆ ಕೈಜೋಡಿಸಿಲ್ಲ. ದೇಶದಲ್ಲಿರುವ ಇತರೆ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಸಲುವಾಗಿ ತತ್ವ ಆದರ್ಶಗಳನ್ನು ಮರೆತು ಸಂದರ್ಭದ ಲಾಭ ಪಡೆಯಲು ಆತುರದ ನಿರ್ಧಾರ ಕೈಗೊಂಡಿವೆ. ಇದಕ್ಕೆ ಹೊರತಾಗಿ ಕಾಂಗ್ರೆಸ್ ಉಳಿದಿದೆ ಎಂದರು.

 ಪ್ರಜಾಪ್ರಭುತ್ವದ ಫಲವನ್ನು ಜನರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಜನರ ಅಪೇಕ್ಷೆಗಳು ಬದಲಾದಂತೆ ಪಕ್ಷ ಕೂಡ ಬದಲಾಗುತ್ತಾ ಚಲನಶೀಲವಾಗಲು ವಿಶೇಷ ಕಾರ್ಯಕ್ರಮಗಳನ್ನು ನೀಡುವ ಅಗತ್ಯವಿದೆ. ವ್ಯವಸ್ಥಿತ ಶಿಸ್ತಿನ ಸಂಘಟನೆಗೆ ಮುಂದಾಗದೇ ಹೋದರೆ ಈಗ ಇರುವ ಸಂಘಟನೆಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಆಗಾಗ್ಗೆ ಉದ್ಭವವಾಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಹೊಣೆಗಾರಿಕೆ ಪಕ್ಷದ ಮೇಲಿದೆ ಎಂದರು.

ಸ್ವಾತಂತ್ರ್ಯ ನಂತರ ಜನೋಪಯೋಗಿ ಕಾನೂನು, ಶಾಸನ ರಚಿಸಿದ ಕೀರ್ತಿ ಕಾಂಗ್ರೆಸ್‌ಗಿದೆ. ಅದರಲ್ಲಿ ಎರಡು ಮಾತಿಲ್ಲ. ಕಾಲಕಾಲಕ್ಕೆ ಬದಲಾದ ಸಮಸ್ಯೆಗಳಿಗೆ ಕಾಂಗ್ರೆಸ್ ಸ್ಪಂದಿಸಿದಂತೆ ಬೇರೆ ಪಕ್ಷಗಳು ಸ್ಪಂದಿಸಿಲ್ಲ.

ತಾಂತ್ರಿಕ ಕ್ಷೇತ್ರದಲ್ಲಾದ ಮಹತ್ವದ ಬದಲಾವಣೆಗೆ ರಾಜೀವ್ ಗಾಂಧಿ ಅವರ ದೂರ ದೃಷ್ಟಿ ಕಲ್ಪನೆಗಳು ಕಾರಣವಾಗಿದೆ. ಅದನ್ನು ಜನತೆ ಮರೆಯಬಾರದು ಎಂದು ನುಡಿದರು.

ದಲ್ಲಾಳಿಗಳು, ಗುತ್ತಿಗೆದಾರರ ಕೈಯಿಂದ ಪಕ್ಷವನ್ನು ಮುಕ್ತಿಗೊಳಿಸಿ ಕಾರ್ಯಕರ್ತರ ಕೈಗೆ ಜವಾಬ್ದಾರಿ ನೀಡಲು ಈಗ ಬೂತ್ ಸಮಿತಿ ಅಧ್ಯಕ್ಷರಿಗೆ ನೀಡಲಾಗಿದ್ದು, ಅವರಿಗೆ ಕಾರ್ಯ ನಿರ್ವಹಿಸಲು ಗುರುತಿನ ಕಾರ್ಡ್ ನೀಡಲಾಗುತ್ತಿದೆ. ಯುವ ಸಮುದಾಯ ಎಷ್ಟು ಪ್ರಮಾಣದಲ್ಲಿ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕಿತ್ತೋ ಆ ಪ್ರಮಾಣದಲ್ಲಿ ಇಲ್ಲ. ರಾಜೀವ್ ಗಾಂಧಿ ಹಾಗೂ ಸ್ಯಾಂ ಪಿತ್ರೋಡ ಅವರ ಕೊಡುಗೆಯನ್ನು ಯುವಜನತೆ ಮರೆತಿರುವುದು ವಿಷಾದನೀಯ ಎಂದರು.

ಅಣ್ಣಾ ಹಜಾರೆ ಅವರ ಹೋರಾಟದ ಲಾಭವನ್ನು ಬಿಜೆಪಿ ಪಡೆಯಲು ಹವಣಿಸುತ್ತಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಜಾತಿ, ಹಣಬಲದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ರಾಜಕೀಯವಾಗಿ ದುರ್ಬಲನಾಗಿರುವವನು ಕಡೆಯದಾಗಿ ಜಾತಿ ಎಂಬ ಅಸ್ತ್ರವನ್ನು ಬಳಸುತ್ತಾನೆ. ಅವಧಿಗಿಂತ ಏಳೆಂಟು ತಿಂಗಳು ಮುಂಚೆ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಬಿ.ಎಲ್. ಶಂಕರ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಕಾಗೋಡು ತಿಮ್ಮಪ್ಪ, ಶಾಸಕ ಕಿಮ್ಮನೆ ರತ್ನಾಕರ್ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಕಡಿದಾಳ್ ದಿವಾಕರ್, ಜಿ.ಪಂ. ಸದಸ್ಯರಾದ ಟಿ.ಎಲ್. ಸುಂದರೇಶ್, ಶ್ರುತಿ ವೆಂಕಟೇಶ್, ಹಾರೋಗೊಳಿಗೆ ಪದ್ಮನಾಭ್, ಕಲಗೋಡು ರತ್ನಾಕರ್, ಪಕ್ಷದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ತಾ.ಪಂ. ಅಧ್ಯಕ್ಷೆ ಮೀನಾಕ್ಷಿ ರಾಮಪ್ಪ, ಉಪಾಧ್ಯಕ್ಷೆ ಜೀನಾವಿಕ್ಟರ್ ಡಿಸೋಜ, ಸದಸ್ಯರಾದ ಕೆಸ್ತೂರ್ ಮಂಜುನಾಥ್, ಬಿ.ಡಿ. ಪ್ರಭಾಕರ್, ಹೊಸಳ್ಳಿ ಸುಧಾಕರ್, ಕುಸುಮಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ, ಮುಖಂಡರಾದ ವೈ.ಎಚ್. ನಾಗರಾಜ್, ದಿನೇಶ್, ಭಾರತಿ ಮಂಜುನಾಥಯ್ಯ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹುಲ್ಲತ್ತಿ ದಿನೇಶ್ ಪ್ರಾರ್ಥಿಸಿದರು, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್ ಪ್ರಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.