ADVERTISEMENT

`ಓದುಗರ ಆಸಕ್ತಿಗೆ ತಕ್ಕ ಕೃತಿಗಳು ಹೊರಬರಲಿ'

`ಶಿವಮೊಗ್ಗ ಸಾಧಕರು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 10:30 IST
Last Updated 15 ಜುಲೈ 2013, 10:30 IST

ಶಿವಮೊಗ್ಗ: ಉತ್ತಮ ಪುಸ್ತಗಳ ರಚನೆ ಆದರೆ ಓದುಗರ ಸಂಖ್ಯೆ ಹೆಚ್ಚಾಗುತ್ತಾರೆ. ಓದುಗ ಪರಂಪರೆಯೂ ಮುಂದುವರಿಯುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಟ್ಟರು.

ನಗರದ ಕಮಲಾ ನೆಹರೂ ರಾಷ್ಟ್ರೀಯ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಎಸ್.ಪಿ. ಪ್ರಕಾಶನ ಹಮ್ಮಿಕೊಂಡಿದ್ದ ಅಂಕಣಕಾರ ಎಂ.ಎನ್.ಸುಂದರರಾಜ್ ಅವರ `ಶಿವಮೊಗ್ಗ ಸಾಧಕರು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಇಂದು ಓದುಗರ ಕೊರತೆ ಇದೆ. ಮಕ್ಕಳನ್ನು, ಯುವಕರನ್ನು ಪ್ರೋತ್ಸಾಹಿಸಿದರೆ ಓದುಗರು ಸೃಷ್ಟಿ ಆಗುತ್ತಾರೆ. ಅವರ ಆಸಕ್ತಿಗೆ ತಕ್ಕ ಪುಸ್ತಕಗಳು ರಚನೆ ಆಗಬೇಕು ಎಂದು ಪ್ರತಿಪಾದಿಸಿದರು.

ಇಂಟರ್‌ನೆಟ್‌ನಲ್ಲಿ ಓದುವುದು `ನೋಡುವ' ಪ್ರಕ್ರಿಯೆ ಅಷ್ಟೆ ಆಗಿದೆ. ಅದರಲ್ಲಿ ಪುಸ್ತಕ ಓದುವಾಗ ಸಿಗುವ ಅನುಭೂತಿ ಯಾಗಲಿ, ಅನುಭವವಾಗಲಿ ಸಿಗುವುದಿಲ್ಲ. ಆದ್ದರಿಂದ ಯುವಜನತೆ ಪುಸ್ತಕ ಓದುವ, ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.  

ರಾಜಕೀಯ, ಸಂಗೀತ, ಸಾಹಿತ್ಯ, ಕೃಷಿ, ಶಿಕ್ಷಣ, ಸಮಾಜ ಸೇವೆ, ಕಲೆ ಹೀಗೆ ವಿವಿಧ ರಂಗಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರ ಪರಿಚಯ ಮಾಡಿಕೊಡುವ ಮೂಲಕ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಬಹುದು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಸ್ಥಳೀಯ ಸಾಧಕರ ಪರಿಚಯ ಮಾಡಿಕೊಡುವ `ಶಿವಮೊಗ್ಗ ಸಾಧಕರು' ಪುಸ್ತಕದ ಆಶಯ ಶ್ಲಾಘನೀಯ. ನಾವು ಹುಟ್ಟಿ ಬೆಳೆದ ಊರು-ಹಳ್ಳಿಯಲ್ಲಿರುವ ಸಾಧಕರ, ಸೇವಕರ ಬಗ್ಗೆ ನಮಗೆ ತಿಳಿಯುವುದೇ ಇಲ್ಲ. ತಿಳಿದುಕೊಳ್ಳಲೇ ಬೇಕಾದ ನಮ್ಮವರ ಬಗ್ಗೆಯೇ ಮಕ್ಕಳಲ್ಲಿ ಅರಿವು ಇರುವುದಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಇಂತಹ ಪುಸ್ತಕಗಳ ಅವಶ್ಯಕತೆ ಇದೆ ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ ಮಾತನಾಡಿ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ `ಅಂಕಣ' ಪ್ರಕಾರ ವಿಶಿಷ್ಠವಾದುದು. ಅದು ಸಾಸಿವೆ ಕೊರೆದು ಸಮುದ್ರ ತುಂಬುವಷ್ಟು ಕಠಿಣ ಕೆಲಸ. ಅಂಕಣಕಾರರಿಗೆ ನಿರಂತರ ಓದು-ಅಧ್ಯಯನ ಮಾಡಿದರೆ ಮಾತ್ರ ಬರವಣಿಗೆ ಮುಂದುವರಿಸಲು ಸಾಧ್ಯ ಎಂದು ತಿಳಿಸಿದರು.

ಅಂಕಣ ಸಾಹಿತ್ಯಕ್ಕೆ ಉತ್ತಮ ಸ್ಥಾನ ಸಿಕ್ಕಿದ್ದು ಹಾ.ಮಾ.ನಾಯ್ಕ ಅವರಿಂದ. ರಾಜರತ್ನಂ, ಗುರುರಾಜ ಕರ್ಜಗಿ, ತಾ.ಸು.ಶಾಮರಾಯ ಅವರಂಥ ಅಂಕಣಕಾರರು ಅದನ್ನು ಗಟ್ಟಿಗೊಳಿಸಿದರು. ವ್ಯಕ್ತಿಯ ಜೀವನಚರಿತ್ರೆ ಬರೆಯುವುದು ಸುಲಭ. ಆದರೆ, ಅಂಕಣದಲ್ಲಿ ವ್ಯಕ್ತಿ ಪರಿಚಯ ಬರೆಯುವುದು ಕಷ್ಟ. ಇದು ಅಂಕಣಕಾರರಿಗೆ ಸವಾಲಿನ ಕೆಲಸ. `ಸುಧಾ' ವಾರಪತ್ರಿಕೆಯಲ್ಲಿ ಎಚ್‌ಎಸ್‌ಕೆ ಅವರು ಬರೆದ `ವಾರದ ವ್ಯಕ್ತಿ' ಅಂಕಣ. ವ್ಯಕ್ತಿ ಪರಿಚಯ ಅಂಕಣಗಳಿಗೆ ಮಾದರಿಯಾಗಿ ಮೂಡಿಬಂತು ಎಂದರು.   

ಉದ್ಯಮಿ ಎಸ್.ರುದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಸ್.ಚಂದ್ರಕಾಂತ್, ಕೈಗಾರಿಕೋದ್ಯಮಿ ಸುಬ್ರಹ್ಮಣ್ಯ, ಅಂಕಣಕಾರ ಎಂ.ಎನ್.ಸುಂದರರಾಜ್ ಉಪಸ್ಥಿತರಿದ್ದರು. ಶಶಿರೇಖಾ ಪ್ರಾರ್ಥಿಸಿದರು. ಡಾ.ಪದ್ಮನಾಭ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.