ADVERTISEMENT

ಕಚೇರಿ ಜಪ್ತಿಗೆ ಮುಂದಾದ ರೈತರು

ಪರಿಹಾರ ನೀಡದ ಹಿನ್ನೆಲೆಯಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:04 IST
Last Updated 20 ಸೆಪ್ಟೆಂಬರ್ 2013, 9:04 IST

ಶಿವಮೊಗ್ಗ:  ನ್ಯಾಯಾಲಯದ ಆದೇಶದ ಹೊರತಾಗಿಯೂ ಭೂ ಸ್ವಾಧೀನ ಪರಿಹಾರ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಸಂತ್ರಸ್ತ ರೈತರು ಇಲ್ಲಿನ ಸಾಗರ ರಸ್ತೆಯ ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಕಚೇರಿ ಜಪ್ತಿಗೆ ಮುಂದಾದ ಘಟನೆ ಗುರುವಾರ ನಡೆದಿದೆ.

ಅಂತಿಮವಾಗಿ ಅಧಿಕಾರಿಗಳು ರೈತರೊಂದಿಗೆ ಸಂಧಾನ ಮಾತುಕತೆ ನಡೆಸಿದರು. ಮುಂದಿನ ಮೂರು ದಿನದೊಳಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ನಂತರ ರೈತರು ಕಚೇರಿ ಜಪ್ತಿ ಮಾಡುವ ನಿರ್ಧಾರ ಕೈಬಿಟ್ಟರು.

ಶಿವಮೊಗ್ಗ ತಾಲ್ಲೂಕಿನ ಗಾಜನೂರಿನ ಮುಳ್ಳುಕೆರೆ ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಳ್ಳಲಾಗಿತ್ತು. ಹೆಚ್ಚಿನ ಪರಿಹಾರಕ್ಕಾಗಿ ಸಂತ್ರಸ್ತ ರೈತರು ಸ್ಥಳೀಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯವು ಹೆಚ್ಚಿನ ಪರಿಹಾರ ನೀಡುವಂತೆ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಆದೇಶ ಹೊರಡಿಸಿತ್ತು. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ತುಂಗಾ ಮೇಲ್ದಂಡೆ ಅಧಿಕಾರಿಗಳು ರೈತರಿಗೆ ಪರಿಹಾರ ಬಿಡುಗಡೆ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮತ್ತೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಕಚೇರಿ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಆದೇಶದ ಪ್ರತಿ ಹಾಗೂ ನ್ಯಾಯಾಲಯದ ಅಮೀನರೊಂದಿಗೆ ಗುರುವಾರ ಸುಮಾರು 20 ರೈತರು ತುಂಗಾ ಮೇಲ್ದಂಡೆ ಕಚೇರಿಗೆ ಆಗಮಿಸಿ ಜಪ್ತಿಗೆ ಮುಂದಾದರು. ಕಚೇರಿಯಲ್ಲಿದ್ದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಅಂತಿಮವಾಗಿ ಅಧಿಕಾರಿಗಳು ರೈತರೊಂದಿಗೆ ಸಂಧಾನ ಮಾತುಕತೆ ನಡೆಸಿದರು. ಕಾಲಮಿತಿಯೊಳಗೆ ಪರಿಹಾರ ಬಿಡುಗಡೆ ಮಾಡುವ ಭರವಸೆ ನೀಡಿದರು. ಈ ಮಾತುಕತೆ ಸಫಲವಾದ ಹಿನ್ನೆಲೆಯಲ್ಲಿ ಜಪ್ತಿ ಕಾರ್ಯವನ್ನು ರೈತರು ಕೈಬಿಟ್ಟರು. ರೈತ ಮುಖಂಡ ಕೆ.ಟಿ.ಗಂಗಾಧರ್ ಮತ್ತಿತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.