ರಿಪ್ಪನ್‌ಪೇಟೆ: ಈ ಬಾರಿಯ ಬಿರುಬೇಸಿಗೆಯ ಝುಳ, ಎಲ್ಲ ಜಲ ಮೂಲಗಳನ್ನು ಆಪೋಶನ ತೆಗೆದು ಕೊಳ್ಳುತ್ತಿದೆ. ಕೆರೆ ಕಟ್ಟೆಗಳಲ್ಲಿ ನೀರು ಕಡಿಮೆಯಾಗಿ ಜಲಚರಗಳ ಸಂಕುಲಕ್ಕೂ ಆಪತ್ತು ಬಂದಿದೆ.
ಆದರೆ, ಇದೇ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿರುವ ಗ್ರಾಮೀಣ ಭಾಗದ ರೈತರು, ‘ಕೆರೆಬೇಟೆ’ಯಲ್ಲಿ ತೊಡಗಿದ್ದು, ಮತ್ಸ್ಯ ಪ್ರಿಯರ ಬಾಯಲ್ಲಿ ನೀರೂರಿಸುವಂತೆ ಮಾಡಿದೆ.
ಹಿಂದೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಹಿರಿಯರು ಕೆರೆ ಬತ್ತುತ್ತಿರು ವುದನ್ನು ಗಮನಿಸಿ ತಮ್ಮ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಬೇಟೆ ದಿನ ಗೊತ್ತು ಪಡಿಸುತ್ತಿ ದ್ದರು. ಬಳಿಕ ಸುತ್ತಮುತ್ತಲಿನ ಗ್ರಾಮ ಗಳಿಗೆ ಸುದ್ದಿ ಮುಟ್ಟಿಸಲು ಸಂತೆಗಳಲ್ಲಿ, ಹಲಗೆ (ತಮಟೆ) ಬಾರಿಸುತ್ತಿದ್ದರು.
ಆಸಕ್ತರು ಗೊತ್ತುಪಡಿಸಿದ ಸಮಯ ಕ್ಕಿಂತ ಮುಂಚಿತವಾಗಿ ಬೇಟೆಗೆ ಬೇಕಾದ ಪರಿಕರಗಳೊಂದಿಗೆ ಕೆರೆಯ ದಂಡೆಯ ಮೇಲೆ ಸಾಲುಗಟ್ಟಿ ನಿಲ್ಲುತ್ತಿದ್ದರು. ನಿಗದಿತ ಶುಲ್ಕ ಪಾವತಿಸಿ, ಮುಖ್ಯಸ್ಥರ ಸೂಚನೆಯಂತೆ ಗಂಟೆ ಬಾರಿಸಿದ ಕೂಡಲೇ ಅಥವಾ ಸಿಳ್ಳೆ ಹಾಕಿ ದೊಡನೆ ಕೇಕೆ ಹಾಕುತ್ತ ನಾಮುಂದು ತಾಮುಂದು ಎಂದು ಓಡೋಡಿ ಕೆರೆಗಿಳಿದು ಬೇಟೆ ಪ್ರಾರಂಭಿಸುತ್ತಿದ್ದದ್ದು ವಾಡಿಕೆ. ಇದರಲ್ಲಿ ಕೆರೆಹಳ್ಳಿಯ ಮರಾಠ ಹಾಗೂ ವಡಗೆರೆಯ ರಜಪೂತ್ ವಂಶದ ಗ್ರಾಮಸ್ಥರು ಈ ಬೇಟೆಯಲ್ಲಿ ನಿಸ್ಸೀಮರು.
ಆ ದಿನಗಳಲ್ಲಿ ಸಿಗುವ ನಾಟಿ ತಳಿಯ ಮುರುಗೋಡು, ಕೊರವ, ಅವಲು, ಚೇಳಿ, ಬಾಳೆ ಮುಂತಾದ ಮೀನುಗಳನ್ನು ಹಿಡಿದು ತಂದು ವಿಧವಿಧದ ಭಕ್ಷ್ಯ ತಯಾರಿಸುತ್ತಿದ್ದರು. ಬಳಿಕ ಮನೆಮಂದಿ ಹಾಗೂ ನೆರೆಹೊರೆಯವರು ಒಟ್ಟಿಗೆ ಕುಳಿತು ಭೋಜನ ಸವಿಯುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಮೀನು ಮರಿ ಸಾಕಾಣಿಕೆಯು ಒಂದು ಉದ್ಯಮವಾಗಿ ಹೊರ ಹೊಮ್ಮಿದೆ. ಹಿಂದಿನ ಮೀನಿನ ತಳಿಗಳ ಸಂತತಿಯೂ ನಶಿಸುತ್ತಿವೆ. ಬಹುತೇಕ ಹಳ್ಳಕೊಳ್ಳ, ಕೆರೆಕಟ್ಟೆಗಳಲ್ಲಿ ಫಾರಂ ಮೀನುಗಳದ್ದೇ ಕಾರುಬಾರು.
ಬಿದಿರಿನ ನೂರಾರು ಕಡ್ಡಿಗಳನ್ನು ಒಟ್ಟುಗೂಡಿಸಿ ಒಂದು ಕಡೆ ನಾಲ್ಕೈದು ಅಡಿ ಸುತ್ತಳತೆ ಹಾಗೂ ಇನ್ನೊಂದೆಡೆ ಒಂದಡಿ ಸುತ್ತಳತೆ ಇರುವ ವಿಶಿಷ್ಟ ರೀತಿಯ ಬುಟ್ಟಿ ಹೆಣೆದು ಇರುಗುಣಿ ಬಳಸಿ ಮೀನು ಬೇಟೆಗೆ ಸಿದ್ಧತೆ ಮಾಡುವುದು ಸಾಮಾನ್ಯ. ಈಗ ಮೀನು ಹಿಡಿಯಲು ತರಹೇವಾರಿ ಬಲೆಗಳು ಮಾರುಕಟ್ಟೆ ಯಲ್ಲಿ ಲಭ್ಯವಿರುವುದರಿಂದ ಇರುಗುಣಿ ಬೇಟೆ ಕಣ್ಮೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.