ADVERTISEMENT

ಕಾನೂನು ತಿಳಿವಳಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:45 IST
Last Updated 10 ಅಕ್ಟೋಬರ್ 2011, 8:45 IST

ಭದ್ರಾವತಿ: `ಮಾನಸಿಕ ಅಸ್ವಸ್ಥರ ನೆಮ್ಮದಿಯ ಬದುಕಿಗೆ ಕಾನೂನು ರಕ್ಷಣೆ ಇದ್ದು, ಅದರ ಸದುಪಯೋಗದ ಅಗತ್ಯವಿದೆ~ ಎಂದು ಶೀಘ್ರ ವಿಲೇವಾರಿ ನ್ಯಾಯಾಲಯ ನ್ಯಾಯಾಧೀಶಆರ್.ಕೆ. ತಾಳಿಕೋಟೆ ಹೇಳಿದರು.

ಇಲ್ಲಿನ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಭಾರತೀಯ ಮನೋವೈದ್ಯ ಸಂಘ, ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಸಹ್ಯಾದ್ರಿ ನರ ಮತ್ತು ಮಾನಸಿಕ ರೋಗ ತಜ್ಞರ ಸಂಘ ಭಾನುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಕ್ಷಮತೆ ಹೊಂದುವಲ್ಲಿ ವಿಫಲನಾದ ವ್ಯಕ್ತಿಯ ರಕ್ಷಣೆಗೆ ಕಾಯ್ದೆ, ಕಾನೂನುಗಳ ಮೂಲಕ ನೆರವು ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ಇದರ ಕುರಿತಾದ ಸಮರ್ಪಕ ತಿಳಿವಳಿಕೆ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

ನ್ಯಾಯಾಧೀಶ ಮಹಮದ್ ಮುಜೀರುಲ್ಲಾ ಮಾತನಾಡಿ, ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿ ತನ್ನನ್ನು ಅರಿತು, ಮತ್ತೊಬ್ಬರ ಜತೆ ವ್ಯವಹರಿಸುವ ಸಶಕ್ತತೆ ಹಾಗೂ ಯಾರಿಗೂ ತೊಂದರೆ ನೀಡುವ ವ್ಯಕ್ತಿತ್ವ ಹೊಂದಿರಬಾರದು ಎಂಬ ವಿವರವಿದೆ. ಇದರಲ್ಲಿ ಸಕ್ಷಮತೆ ಸಾಧಿಸಿದರೆ ಮಾನಸಿಕ ಆರೋಗ್ಯವಂತರು ಎಂದು ವಿವರ ನೀಡಿದರು.

ಮಾನಸಿಕ ಆರೋಗ್ಯ ವಿಷಯದ ಜತೆ ಇತ್ತೀಚಿನ ದಿನದಲ್ಲಿ ಅಸ್ವಸ್ಥರ ರಕ್ಷಣೆಗಾಗಿ ಸಹ ಹಲವು ಕಾಯ್ದೆಗಳು ಜಾರಿಯಲ್ಲಿವೆ. ಅದನ್ನು ಮತ್ತಷ್ಟು ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮನೋರೋಗ ಕುರಿತು ಜಾಗೃತಿ ಮಾಡಿಸುವ ರೂಪಕ ಪ್ರದರ್ಶನ ಸಹ ನಡೆಯಿತು. ವಕೀಲರ ಸಂಘದ ಅಧ್ಯಕ್ಷ ಎ.ಬಿ. ನಂಜಪ್ಪ, ಡಾ.ಎಚ್.ಸಿ. ಸಂಜಯ್, ಡಾ.ಎ. ಶಿವರಾಮಕೃಷ್ಣ ಮಾನಸಿಕ ಅಸ್ವಸ್ಥತೆಗೆ ಕಾರಣ, ಪರಿಹಾರ ಕುರಿತು ಉಪನ್ಯಾಸ ನೀಡಿದರು. ಮುಕ್ತಾಪ್ರಸಾದ್ ಪ್ರಾರ್ಥಿಸಿದರು, ಡಾ.ಕೆ.ಆರ್. ಶ್ರೀಧರ್ ಸ್ವಾಗತಿಸಿದರು, ಡಾ.ಹರಿಣಾಕ್ಷಿ ನಿರೂಪಿಸಿದರು, ಡಾ.ಹರೀಶ ದೇಲಂತಬೆಟ್ಟು ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.