ADVERTISEMENT

ಕಾಯ್ದೆ ಅನುಷ್ಠಾನ ದುರಂತ ಕಥೆ: ಕಾಗೋಡು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 10:25 IST
Last Updated 17 ಅಕ್ಟೋಬರ್ 2012, 10:25 IST

ಶಿವಮೊಗ್ಗ: ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ದುರಂತ ಕಥೆಯಾಗಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಇಲ್ಲದ ಕಾರಣ ನೀಡಿ ಈ ಕಾಯ್ದೆ ವಿಫಲಗೊಳಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ, ಗ್ರಾಮ ಅರಣ್ಯ ಹಕ್ಕು ಸಮಿತಿಗಳನ್ನು ಪೂರ್ಣವಾಗಿ ರಚಿಸಿಲ್ಲ. ರಚನೆಗೊಂಡ ಸಮಿತಿಗಳಿಗೆ ಕನಿಷ್ಠದ ಸೌಲಭ್ಯಗಳನ್ನು ಒದಗಿಸದೆ ಅವುಗಳನ್ನು ನಿಷ್ಕ್ರಿಯಗೊಳಿಸಿದೆ. ಇದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿದ್ದು, ಅರಣ್ಯ ರಕ್ಷಣೆ ಎಂಬ ಭ್ರಮೆಯನ್ನಿಟ್ಟುಕೊಂಡು ಈಗಾಗಲೇ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರವೇ ನೀಡಿದ ಹಕ್ಕು ನೀಡುವಲ್ಲಿ ವಿಳಂಬ  ಮಾಡುತ್ತಿದ್ದಾರೆ ಎಂದು  ಮಂಗಳವಾರ  ಸುದ್ದಿಗೋಷ್ಠಿ  ಯಲ್ಲಿ  ಆರೋಪಿಸಿದರು.

 ಜನರಿಗೆ ಅರ್ಜಿ  ನಮೂನೆಗಳನ್ನು  ವಿತರಿಸಿಲ್ಲ; ಈ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ. ತಮ್ಮ ಸತತ ಪ್ರಯತ್ನದ ಫಲವಾಗಿ ಈಚೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಈ ಕಾಯ್ದೆ ಅನುಷ್ಠಾನಗೊಳಿಸುವ ಎಲ್ಲಾ ಇಲಾಖೆಗಳಿಗೆ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಸಹಕರಿಸುವಂತೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿದರು.

ಕಾಯ್ದೆಯಲ್ಲಿ ಅರ್ಹ ಫಲಾನುಭವಿ 13 ದಾಖಲೆಗಳನ್ನು ಒದಗಿಸಲು ಸೂಚಿಸಿದೆ. ಅದರಲ್ಲಿ 75 ವರ್ಷದ ಕುರುಹುಗಾಗಿ ಹಿರಿಯರ ಹೇಳಿಕೆ ಅಥವಾ ತೆಂಗಿನ ಮರ ಇನ್ಯಾವುದೇ ದಾಖಲೆ ನೀಡಲು ಸೂಚಿಸಿದೆ. ಬಿಜೆಪಿ ಇದರಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸಿ, ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ ಎಂಬಂತೆ ಬಿಂಬಿಸುತ್ತಿದೆ. 75 ವರ್ಷದ ದಾಖಲೆಗಳ ಕುರಿತಂತೆ ಕಾಯ್ದೆಯಲ್ಲಿ ಸಣ್ಣ ತಿದ್ದುಪಡಿ ಆಗಬೇಕು ಎನ್ನುವುದಕ್ಕೆ ನಮ್ಮ ಸಹಮತ ಇದೆ.

ಆದರೆ, ಇಡೀ ಕಾಯ್ದೆಯೇ ಅನುಷ್ಠಾನಕ್ಕೆ ಯೋಗ್ಯ ಇಲ್ಲ ಎಂದು ಸರ್ಕಾರ ಮತ್ತು ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದು ಅಸಹಯನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ತೀ.ನಾ. ಶ್ರೀನಿವಾಸ, ರಮೇಶ್ ಹೆಗ್ಡೆ, ರುದ್ರೇಶ್, ಕಲಗೋಡು ರತ್ನಾಕರ, ಕೆ.ಬಿ. ಪ್ರಸನ್ನಕುಮಾರ್, ಎಸ್.ಟಿ. ಹಾಲಪ್ಪ ಉಪಸ್ಥಿತರಿದ್ದರು.

ಯಡಿಯೂರಪ್ಪ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, `ಯಡಿಯೂರಪ್ಪ ನಿರೀಕ್ಷೆಯಿಂದ ಯಾರೂ ಕುಳಿತಿಲ್ಲ. ಜಿಲ್ಲೆಯಲ್ಲಿ ಪಕ್ಷ ಸುರಕ್ಷಿತವಾಗಿದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾದರೆ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತದೆ~ ಎಂದರು.

 ಯಡಿಯೂರಪ್ಪ ಸಾಗರದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ, `ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಲು ಸ್ವತಂತ್ರರು~ ಎಂದಷ್ಟೇ ಪ್ರತಿಕ್ರಿಯಿಸಿದರು.  ಶಿಕಾರಿಪುರದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ ಮಾಡಲಿದೆಯೇ ಎಂಬ ಪ್ರಶ್ನೆಗೆ `ಸದ್ಯ ಯಾವುದೇ ಮಾಹಿತಿ ಇಲ್ಲ. ಅಲ್ಲಿ ಬಗರ್‌ಹುಕುಂ ರೈತರ ಸಮಾವೇಶ ಮಾಡಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.