ADVERTISEMENT

ಕಾಯ್ದೆ ಸಡಿಲಿಸಿ ದೇವಸ್ಥಾನಕ್ಕೆ ಆನೆ ರವಾನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:15 IST
Last Updated 13 ಫೆಬ್ರುವರಿ 2011, 9:15 IST

ಶಿವಮೊಗ್ಗ: ಪ್ರಾಣಿ ವಿನಿಮಯದ ಹೆಸರಿನಲ್ಲಿ ಸಕ್ರೆಬೈಲಿನ ಆನೆಬಿಡಾರದ ತರಬೇತಿ ಪಡೆದ ಆನೆಯೊಂದುಪಾಂಡಿಚೇರಿಯ ತಿರುನಲ್ಲೂರಿನ ಶನೇಶ್ವರ ದೇವಸ್ಥಾನದ ಪಾಲಾಗಿದೆ!
ಕೇಂದ್ರ ಪ್ರಾಣಿ ಸಂಗ್ರಹಾಲಯದ ಪ್ರಾಧಿಕಾರ 2000ರ ಜೂನ್ 28ರಂದು ಹೊರಡಿಸಿದ ಆದೇಶದಂತೆ ಯಾವುದೇ ಆನೆಯನ್ನು ಧಾರ್ಮಿಕ ಸಂಸ್ಥೆಗಳಿಗೆ ಅಥವಾ ಖಾಸಗಿ ವ್ಯಕ್ತಿಗಳಿಗೆ ದಾನ ಕೊಡುವಂತಿಲ್ಲ. ಹಾಗೆಯೇ ಮಾರಾಟ ಮಾಡುವಂತಿಲ್ಲ.

ಆದರೆ, ರಾಜ್ಯ ಸರ್ಕಾರ ಸಕ್ರೆಬೈಲಿನ ಆನೆಯನ್ನು ಪಾಂಡಿಚೇರಿಯ ತಿರುನಲ್ಲೂರಿನ ಶನೇಶ್ವರ ದೇವಸ್ಥಾನಕ್ಕೆ ವಿಶೇಷ ಪ್ರಕರಣವಾಗಿ ಪರಿಗಣಿಸಿ ಅಲ್ಲಿಗೆ ಕಳುಹಿಸಿಕೊಟ್ಟಿದೆ.  ‘ಆನೆ ಉತ್ಸವ’ದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುತ್ತಿದ್ದ ಪ್ರಕೃತಿ ಫುಟ್‌ಬಾಲ್ ಸೇರಿದಂತೆ ಹಲವು ಆಟಗಳಲ್ಲಿ ಬಹುಮಾನ ಗೆಲ್ಲುತ್ತಿತ್ತು. ಪ್ರಕೃತಿ ಬದಲಿಗೆ ಪಾಂಡಿಚೇರಿಯ ತಿರುನಲ್ಲೂರಿನ ಶನೇಶ್ವರ ದೇವಸ್ಥಾನದಲ್ಲಿದ್ದ ಗಣೇಶ ಇಲ್ಲಿಗೆ ಬಂದಿದ್ದಾನೆ. ವಿಶೇಷ ಎಂದರೆ ಈ ಗಣೇಶನಿಗೆ ದಂತಗಳಿಲ್ಲ. ಮಖಾನ್ ತಳಿಯ ಈ ಆನೆ ಅಲ್ಲಿಯ ದೇವಸ್ಥಾನದಲ್ಲಿ ಸ್ವಲ್ಪ ಪುಂಡಾಟಿಕೆ ತೋರಿಸುತ್ತಿದ್ದನಂತೆ. ‘ಭಕ್ತರು ಇರುವ ಜಾಗದಲ್ಲಿ ಈತನನ್ನು ಸಂಭಾಳಿಸುವುದು ಕಷ್ಟ. ಅದರಲ್ಲೂ ಮಖಾನ್ ತಳಿಯ ಆನೆ ಜನರಿರುವ ಜಾಗದಲ್ಲಿ ಎಂದಿದ್ದರೂ ಅಪಾಯ ಎಂದು ಪಶುವೈದ್ಯರು ತಮಗೆ ಹೇಳಿದ್ದಾರೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ರಾಜ್ಯ ಸರ್ಕಾರಕ್ಕೆ 2010ರ ನ. 16ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿ ಬರೆದ ಪತ್ರಕ್ಕೆ ರಾಜ್ಯದ ಅರಣ್ಯ ಇಲಾಖೆ ವಿಶೇಷ ಪ್ರಕರಣ ಎಂದು ಇದನ್ನು ಪರಿಗಣಿಸಿದ್ದಕ್ಕೂ ಕಾರಣವಿದೆ. 2010ರ ಅಕ್ಟೋಬರ್‌ನಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಂಡಿಚೇರಿಯ ತಿರುನಲ್ಲೂರಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ದೇವಸ್ಥಾನಕ್ಕೆ ` 40 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದರು. ಹಾಗೆಯೇ, ಆನೆ ವಿನಿಮಯ ಮಾಡಿಕೊಡಬೇಕೆಂಬ ದೇವಸ್ಥಾನದ ಆಡಳಿತ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ 2010 ನವೆಂಬರ್ 25ರಂದು ಕೇಂದ್ರದ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ 2000ರ ಆದೇಶವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದೆ. ತದನಂತರ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 2011ರ  ಜನವರಿ 20ರಂದು ಪ್ರಾಣಿ ವಿನಿಮಯ ಕುರಿತಂತೆ ಹೊಸ ಆದೇಶ ಹೊರಡಿಸಿದೆ.
ಅನುಕೂಲವಾಗಲಿದೆ

‘ಏನೇ ವಿವಾದಗಳಿದ್ದರೂ ಸಕ್ರೆಬೈಲು ಆನೆಬಿಡಾರಕ್ಕೆ ಅನುಕೂಲವಾಗಲಿದೆ. ಮುಖಾನ್ ಅಪರೂಪದ ತಳಿಯಾಗಿದ್ದರಿಂದ ಸಕ್ರೆಬೈಲಿನಲ್ಲಿ ಆನೆಯ ಉತ್ತಮ ವಂಶಾಭಿವೃದ್ಧಿಗೆ ಸಹಕಾರಿಯಾಗಲಿದೆ. ಆತಿಥಿಯಾಗಿ ಆಗಮಿಸಿರುವ ಈ ಆನೆಗೆ ಕೇವಲ 17 ವರ್ಷ. ಇದಕ್ಕೆ ವಯಸ್ಸಾಗಿದೆ ಎಂಬುದು ಸುಳ್ಳು. ದೇವಸ್ಥಾನದಲ್ಲಿ ಗಲಾಟೆ ಮಾಡುತ್ತಿತ್ತು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ’ ಎಂದು ಉಪಸಂರಕ್ಷಣಾಧಿಕಾರಿವನ್ಯಜೀವಿ ವಿಭಾಗ) ಟಿ.ಜಿ. ರವಿಕುಮಾರ್ ‘ಪ್ರಜಾವಾಣಿ’ಗೆಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.