ADVERTISEMENT

ಕುಬಟೂರು ದ್ಯಾಮವ್ವ ದೇವಸ್ಥಾನದಲ್ಲಿ ಬ್ರಹ್ಮ ಕಳಸ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:41 IST
Last Updated 28 ಅಕ್ಟೋಬರ್ 2017, 9:41 IST

ಆನವಟ್ಟಿ: ‘ಬಂಗಾರಪ್ಪ ಈ ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ತಂದೆಯ ಅಭಿವೃದ್ಧಿ ಕೆಲಸಗಳನ್ನು ಮಗನಾದ, ಶಾಸಕ ಮಧು ಬಂಗಾರಪ್ಪ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ಕುಬಟೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೋಪುರಕ್ಕೆ ಬ್ರಹ್ಮ ಕಳಸ ಪ್ರತಿಷ್ಠಾಪನೆ ಮತ್ತು ಆರೋಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವಸ್ಥಾನದ ಎದುರು ಶಿಥಿಲಾವಸ್ಥೆ ತಲುಪಿರುವ ಎರಡು ಮನೆಗಳನ್ನು ಕಂಡ ಸಚಿವರು, ಕಾರ್ಯಕ್ರಮದಲ್ಲಿ ಹಾಜರಿದ್ದ ತಹಶೀಲ್ದಾರ್‌ಗೆ ಅಶ್ರಯ ಮನೆ ನಿರ್ಮಿಸಿ ಕೊಡುವಂತೆ ಆದೇಶಿಸಿದರು.

ಧಾರ್ಮಿಕ ಧ್ವಜಾರೋಹಣ ನೆರವೇರಿಸಿದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ವಿವಿಧ ಸಂಸ್ಕೃತಿ, ಧಾರ್ಮಿಕ ಆಚರಣೆಗಳಿಂದ ಕೊಡಿದ ದೇಶ ನಮ್ಮದು ಎಂದು ಹೇಳಿದರು. ದ್ಯಾಮ್ಮವ್ವನ ಜಾತ್ರೆ ಒಂಬತ್ತು ವರ್ಷಗಳಿಗೊಮ್ಮೆ ನಡೆಯುತ್ತದೆ.

ADVERTISEMENT

ಇದನ್ನು ಐದು ವರ್ಷಗಳಿಗೊಮ್ಮೆ ಆಚರಿಸುವಂತೆ ಮಾಡಬೇಕು ಎಂಬ ಕೆಲವರ ಅಭಿಪ್ರಾಯಕ್ಕೆ ಸಚಿವ ಪ್ರತಿಕ್ರಿಯಿಸಿದ್ದು ಹೀಗೆ: ‘ಕುರಿ, ಕೋಳಿ ಕಡಿದು ಮಾರಿಜಾತ್ರೆ ಮಾಡುವ ಹಿಂದುಳಿದ ವರ್ಗದ ಜನ ಉದ್ಧಾರವಾಗಿಲ್ಲ. ದುಡಿದು ಉಳಿಸಿದ ಹಣವನ್ನು ಜಾತ್ರೆ ಮಾಡುವುದಕ್ಕೆ ಖರ್ಚು ಮಾಡುತ್ತೇವೆ’.

‘ದ್ಯಾಮ್ಮವ್ವನ ದೇವಸ್ಥಾನದ ಜೀಣೋದ್ಧಾರಕ್ಕೆ ₹ 20 ಲಕ್ಷ ನೀಡಿದ್ದೇನೆ. ಮಧು ಬಂಗಾರಪ್ಪ ಅವರ ಮನವಿ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಸಲಹೆಯಂತೆ ದೇವಸ್ಥಾನದ ಉಳಿದ ಕಾಮಗಾರಿಗೆ ₹ 15 ಲಕ್ಷ ಈಗಾಗಲೇ ಮಂಜೂರು ಮಾಡಿದ್ದೇನೆ. ಬಂಕಸಾಣದ ಹೋಳೆಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರಕ್ಕೆ ₹ 10 ಲಕ್ಷ ನೀಡುವೆ’ ಎಂದು ಭರವಸೆ ನೀಡಿದರು.

ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪಿ ವಾಗೀಶ ಮಾತನಾಡಿ, ‘ದ್ಯಾಮ್ಮವ್ವನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು. ಗ್ರೇಡ್ ‘ಸಿ’ ಪಟ್ಟಿಯಲ್ಲಿ ಇದೆ. ತಾಲ್ಲೂಕಿನಲ್ಲಿ ಪ್ರಸಿದ್ಧಿ ಪಡೆದ ದೇವಸ್ಥಾನ ಇದಾಗಿದ್ದು, ಗ್ರೇಡ್ ‘ಎ’ ಸ್ಥಾನದ ಮಾನ್ಯತೆಯನ್ನು ಈ ದೇವಸ್ಥಾನಕ್ಕೆ ನೀಡಬೇಕು’ ಎಂದು ಮನವಿ ಮಾಡಿದರು. ಶಾಸಕ ಮಧು ಬಂಗಾರಪ್ಪ ಮಾತನಾಡಿದರು.

ಸಮಾರಂಭದ ಸಾನ್ನಿಧ್ಯವನ್ನು ಜಡೆ ಮಠದ ಶ್ರೀ ಮಹಾಂತ ಸ್ವಾಮಿ ಹಾಗೂ ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಎಂ.ನಿಂಗಪ್ಪ ಹಾಗೂ ಸದಸ್ಯರು, ತಹಶೀಲ್ದಾರ್ ಚಂದ್ರಶೇಖರ್, ಪ್ರಭಾರ ಇಒ ಮತ್ತು ಬಿಇಒ ಮಂಜುನಾಥ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ ಹಾವಣ್ಣನವರ್, ಸದಸ್ಯೆ ಅಂಜಲಿ ಸಂಜೀವ್, ಎಪಿಎಂಸಿ ಅಧ್ಯಕ್ಷ ಎಲ್‌.ಜಿ ರಾಜಶೇಖರ್, ಕುಬಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿಕಿರಣ, ಗಣಪತಿ ಹುಲ್ತಿಕೊಪ್ಪ, ಕೆ.ಪಿ ರುದ್ರಗೌಡ, ಅಜ್ಜಪ್ಪ, ವೀರಪ್ಪ ಜಡೆ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.