ADVERTISEMENT

ಕೆಜೆಪಿ ಸಮಾವೇಶಕ್ಕೆ ಜಿಲ್ಲೆಯಿಂದ 75 ಸಾವಿರ ಜನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:40 IST
Last Updated 8 ಡಿಸೆಂಬರ್ 2012, 6:40 IST

ಶಿವಮೊಗ್ಗ: ಹಾವೇರಿಯಲ್ಲಿ ಡಿ. 9ರಂದು ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 75 ಸಾವಿರ ಜನ ಪಾಲ್ಗೊಳ್ಳುವರು ಎಂದು ಕೆಜೆಪಿ ಮುಖಂಡ ಕೆ.ಪಿ. ಪುರುಷೋತ್ತಮ್ ತಿಳಿಸಿದರು.

1ಸಾವಿರ ಬಸ್, ಅದರಲ್ಲಿ 500 ಕೆ.ಎಸ್.ಆರ್.ಟಿ.ಸಿ, 500 ಖಾಸಗಿ ಬಸ್‌ಗಳು, 50 ಟೆಂಪೋ ಟ್ರಾವೆಲ್ಲರ್‌ಗಳು, 200 ಕ್ರೂಸರ್ಸ್‌ಗಳು, 200 ಓಮ್ನಿ ಕಾರುಗಳಲ್ಲಿ ಬಂದರೆ, 1ಸಾವಿರ ಸ್ವಂತ ಕಾರುಗಳಲ್ಲಿ ಬರುವರು. ಹಾವೇರಿ ಹತ್ತಿರ ಸೊರಬ, ಶಿಕಾರಿಪುರದ ಜನ 1,200 ದ್ವಿಚಕ್ರ ವಾಹನಗಳಲ್ಲಿ ಆಗಮಿಸುವರು. ಈ ಎಲ್ಲಾ ವಾಹನಗಳಿಂದ ಒಟ್ಟು 75 ಸಾವಿರ ಜನ ಸಮಾವೇಶದಲ್ಲಿ ಭಾಗವಹಿಸುವರು. ಇದರಲ್ಲಿ 10ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಯಡಿಯೂರಪ್ಪ ಅವರು ಆಹ್ವಾನ ನೀಡಿದಂತೆ ಈ ಎಲ್ಲರೂ ಸ್ವಂತ ಖರ್ಚಿನಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಊಟದ ವ್ಯವಸ್ಥೆಯನ್ನು ಸಮಾವೇಶ ಸಂಘಟಕರಿಂದ ಆಯೋಜಿಸಲಾಗಿದೆ ಎಂದರು.

ಸಮಾವೇಶಕ್ಕೆ ಒಟ್ಟು 5ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಯಡಿಯೂರಪ್ಪ ಅವರ ತವರು ಜಿಲ್ಲೆಯಿಂದಲೇ ಹೆಚ್ಚಿನ ಜನ ಭಾಗವಹಿಸುತ್ತಿರುವುದು ಸಹಜವಾಗಿ ಪಕ್ಷಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹ ತೋರಿದ್ದಾರೆ. ಸಮಾವೇಶಕ್ಕೆ ಇನ್ನೂ ಹೆಚ್ಚಿನ ಜನ ಭಾಗವಹಿಸುವವರಿದ್ದರೂ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೆಯೇ, ಡಿ. 9ರಂದು ಜಿಲ್ಲೆಯಲ್ಲಿ ಬಸ್ ಸಂಚಾರದಲ್ಲಿ ಆಗುವ ವ್ಯತ್ಯಯಕ್ಕೆ ಪಕ್ಷ ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತದೆ ಎಂದರು.

ಡಿ. 9ರ ನಂತರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರಾಜಕೀಯ ದ್ರುವೀಕರಣವಾಗುತ್ತದೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಂದ ಮುಖಂಡರು, ಕಾರ್ಯಕರ್ತರು ಕೆಜೆಪಿ ಸೇರ್ಪಡೆಗೊಳ್ಳುತ್ತಾರೆ. ಈಗಾಗಲೇ ಜಿಲ್ಲೆಯಲ್ಲಿ ಶಿಕಾರಿಪುರ, ಸಾಗರ, ಸೊರಬ, ಹೊಸನಗರಗಳಲ್ಲಿ ಬಿಜೆಪಿ ಸಂಪೂರ್ಣ ಕೆಜೆಪಿ ಆಗಿದೆ. ಇನ್ನೂ ತೀರ್ಥಹಳ್ಳಿ ಶೇಕಡ 50ಕ್ಕಿಂತ ಹೆಚ್ಚು ಕೆಜೆಪಿ ಆಗಿದೆ.

ಭದ್ರಾವತಿಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಕೆಜೆಪಿ ಆಗಿದೆ. ಶಿವಮೊಗ್ಗದಲ್ಲೂ ಪ್ರಮುಖ ಕಾರ್ಯಕರ್ತರು ಕೆಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸಮಾವೇಶದ ನಂತರ ಇದು ಇನ್ನೂ ಸ್ಪಷ್ಟಗೊಳ್ಳಲಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಪಕ್ಷದ ಸ್ಥಾಪನೆ, ಅಭ್ಯರ್ಥಿಗಳ ಘೋಷಣೆ ಎಲ್ಲವೂ ಸಮಾವೇಶದ ನಂತರ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಮುಖಂಡರಾದ ರುದ್ರೇಗೌಡ, ಎಸ್.ಎಸ್. ಜ್ಯೋತಿಪ್ರಕಾಶ್, ಬಿಳಕಿ ಕೃಷ್ಣಮೂರ್ತಿ, ಅಶೋಕ್ ಪೈ, ಹೊನ್ನಪ್ಪ, ಡಿಸೋಜಾ, ಬಳ್ಳೇಕೆರೆ ಸಂತೋಷ್, ಐಡಿಯಲ್ ಗೋಪಿ, ಪೂಜಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.