ADVERTISEMENT

ಕೇಂದ್ರದಲ್ಲೂ ಪ್ರತ್ಯೇಕ ಕೃಷಿ ಬಜೆಟ್

ಭದ್ರಾವತಿ: ಬಿಜೆಪಿ ಪ್ರಚಾರ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಭದ್ರಾವತಿ: ‘ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ ಮಾಡುವಂತೆ ಒತ್ತಾಯಿಸಿ, ಅದನ್ನು ಕಾರ್ಯರೂಪಕ್ಕೆ ತರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಘೋಷಣೆ ಮಾಡಿದರು.

ಇಲ್ಲಿನ ಅರಳಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾದಾಗ ನೀಡಿದ ಕೃಷಿ ಬಜೆಟ್ ರಾಷ್ಟ್ರದಲ್ಲೇ ಪ್ರಥಮ, ಇದನ್ನು ಕೇಂದ್ರದಲ್ಲೂ ಜಾರಿ ಗೊಳಿಸುವ ಪ್ರಯತ್ನದ ಉತ್ಸಾಹದಲ್ಲಿ ನಾನಿದ್ದೇನೆ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿಯಾದ ಸಂದರ್ಭ ದಲ್ಲಿ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಹಕಾರಿ ಸಂಸ್ಥೆಗಳಲ್ಲಿ ಕೃಷಿಕರು ಮಾಡಿದ್ದ ಸಾಲವನ್ನು ಮನ್ನಾ ಮಾಡಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ಇದೇ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮತ್ತಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸಲು ಯಾವುದೇ ಕಷ್ಟ ಆಗಲಾರದು ಎಂಬ ವಿಶ್ವಾಸವಿದೆ. ಇದನ್ನು ಸಹ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿ ಜಾರಿ ಮಾಡುವ ಯತ್ನ ಮಾಡುತ್ತೇನೆ’ ಎಂದರು.

ADVERTISEMENT

ಜಿಲ್ಲೆ ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಲವು ಕನಸುಗಳನ್ನು ಕಂಡಿದ್ದೇನೆ. ಅದನ್ನು ನನಸು ಮಾಡಲು ನಿಮ್ಮೆಲ್ಲರ ಸಹಕಾರ ನೀಡಿ, ಬೆಂಬಲಸಿ ಎಂದು ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭಯೋತ್ಪಾದನೆ, ಅಭದ್ರತೆ ವಾತಾವರಣ ಸೃಷ್ಟಿಯಾಗಲು ಕಾಂಗ್ರೆಸ್ ನೇತೃತ್ವದ ಯುಪಿಎ ಕಾರಣ, ಇದನ್ನು ದೂರ ಮಾಡಲು ಮೋದಿ ಬೆಂಬಲಿಸಿ ಎಂದು ಕರೆ ನೀಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಜ್ಯೋತಿ ಪ್ರಕಾಶ್, ರುದ್ರೇಗೌಡರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚೂಡಾಮಣಿ, ಕೆ.ಎನ್‌.ಚಂದ್ರಪ್ಪ, ವಿ.ಕದಿರೇಶ್, ಕ್ಷೇತ್ರ ಅಧ್ಯಕ್ಷ ಎಂ.ಮಂಜುನಾಥ್, ಅರಳಿಹಳ್ಳಿ ಪ್ರಕಾಶ್, ಗೌರಮ್ಮ, ಕೂಡ್ಲಿಗೆರೆ ಹಾಲೇಶ್ ಉಪಸ್ಥಿತರಿದ್ದರು.

ಇಟಲಿ ಮಾತೆ ಭಾವಚಿತ್ರ ಇಡಬೇಕಾ: ಬಿಜೆಪಿ ಶನಿವಾರ ಬೂತ್ ಮಟ್ಟದಲ್ಲಿ ಭಾರತಮಾತೆ ಭಾವಚಿತ್ರ ಇಟ್ಟು ಕಾರ್ಯಕ್ರಮ ಮಾಡಿದರೆ ಕಾಂಗ್ರೆಸ್ ಪಕ್ಷದವರು ನೀತಿಸಂಹಿತೆ ಉಲ್ಲಂಘನೆ ಅಂತ ಆಯೋಗಕ್ಕೆ ದೂರು ನೀಡಿದ್ದಾರೆ. ಹಾಗಾದರೆ ಇಟಲಿ ಮಾತೆ ಭಾವಚಿತ್ರ ಇಡಬೇಕಾ ಎಂದು ವಿರೋಧ ಪಕ್ಷದವರನ್ನು ಕುಟುಕಿದರು.

‘ಭಾರತಮಾತೆ ಪೂಜಿಸುವ ಜನರು ಇನ್ನು ರಾಷ್ಟ್ರದಲ್ಲಿ ಇದ್ದಾರೆ ಎಂದು ತೋರಿಸುವ ಕೆಲಸವನ್ನು ನಾವು ಮಾಡಿದರೆ, ನಮ್ಮ ವಿರೋಧಿಗಳಿಗೆ ಸಹಿಸಲು ಸಾಧ್ಯವಾಗಿಲ್ಲ, ದೂರು ದಾಖಲಿಸಿದ ಇಂತಹ ದೇಶದ್ರೋಹಿಗಳ ಮೇಲೆ ಮೊದಲು ಕ್ರಮ ಜರುಗಿಸಲಿ’ ಎಂದು ಆಗ್ರಹಿಸಿದರು.

ಯಾರನ್ನು ದೂಷಿಸಲ್ಲ: ‘ಸಾಧನೆಗಳ ಬಗ್ಗೆ ಮಾತನಾಡಬಾರದು. ಸಾಧನೆ ಮಾತನಾಡಬೇಕು ಎಂಬುದರಲ್ಲಿ ನಂಬಿಕೆ ಇಟ್ಟ ನಾನು ಯಾವುದೇ ಪಕ್ಷ, ವ್ಯಕ್ತಿ ಹೆಸರು ಹೇಳಿ ಮಾತನಾಡುವುದಿಲ್ಲ’ ಎಂದು ಬಿ.ಎಸ್‌. ಯಡಿಯೂರಪ್ಪ ತಮ್ಮದೇ ಧಾಟಿಯಲ್ಲಿ ಜನರ ಒಲೈಕೆಗೆ ಕಸರತ್ತು ನಡೆಸಿದರು.

‘ನನ್ನ ಸರಳ ಸಜ್ಜನಿಕೆ, ನೀವು ಬಂದಾಗ ನಾನು ತೋರಿರುವ ಪ್ರೀತಿ, ಕೈಲಾದ ಮಟ್ಟಿಗೆ ಮಾಡಿರುವ ಸೇವೆ, ಜಿಲ್ಲೆ ಹಾಗೂ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆಧಾರದ ಮೇಲೆ ನಿಮ್ಮ ಮುಂದೆ ನಿಂತಿದ್ದೇನೆ’ ಎಂದು ತಮ್ಮದೇ ಮಾತಿನ ಮೋಡಿಯಲ್ಲಿ ಗಮನಸೆಳೆಯುವ ಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.