ADVERTISEMENT

ಕೇಂದ್ರ ರೈಲ್ವೆ ಬಜೆಟ್ ಬಳಿಕ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 7:55 IST
Last Updated 18 ಜನವರಿ 2012, 7:55 IST

ಸಾಗರ: ಈ ಭಾಗದ ಜನರ ಬೇಡಿಕೆಯಂತೆ ತಾಳಗುಪ್ಪದಿಂದ ಬೆಂಗಳೂರಿಗೆ ರೈಲು ಸಂಚಾರವನ್ನು ಈ ವರ್ಷದ ಕೇಂದ್ರ ರೈಲ್ವೆ ಬಜೆಟ್ ಮಂಡನೆಯಾದ ತಕ್ಷಣ ಆರಂಭಿಸಲಾಗುವುದು ಎಂದು ನೈರುತ್ಯ ವಲಯದ ಮೈಸೂರು ವಿಭಾಗೀಯ ಉಪ ವ್ಯವಸ್ಥಾಪಕ ವಿನೋದಕುಮಾರ್ ಹೇಳಿದರು.

ಇಲ್ಲಿನ ರೈಲ್ವೆ ಮಾರ್ಗದ ತಪಾಸಣೆಗೆ  ಆಗಮಿಸಿದ್ದ ಸಂದರ್ಭದಲ್ಲಿ ಶಿವಮೊಗ್ಗ - ತಾಳಗುಪ್ಪ ರೈಲ್ವೆ ಬ್ರಾಡ್‌ಗೇಜ್ ಹೋರಾಟ ಸಮಿತಿ ವತಿಯಿಂದ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಾಳಗುಪ್ಪ ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಬೇಕಿದೆ ಎಂದರು.

ಆದಷ್ಟು ಶೀಘ್ರವಾಗಿ ತಾಳಗುಪ್ಪದಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಗೊಳ್ಳಬೇಕು ಎಂಬ ಈ ಭಾಗದ ಜನರ ಒತ್ತಾಯ ಇಲಾಖೆಯ ಗಮನದಲ್ಲಿದೆ. ಇಲಾಖೆಯ ವಿಧಿ-ವಿಧಾನಗಳು ಪೂರ್ಣಗೊಳ್ಳುವುದು ಬಾಕಿ ಇದ್ದು, ಅದು ಪೂರ್ಣಗೊಂಡ ನಂತರ ರೈಲು ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ಈಗ ತಾಳಗುಪ್ಪದಿಂದ ಮೈಸೂರಿಗೆ ಸಂಚರಿಸುತ್ತಿರುವ ರೈಲು ನಿಯಮಿತ ವೇಳೆಯಲ್ಲಿ ಓಡಾಡುತ್ತಿಲ್ಲ, ರಾತ್ರಿ 11ರ ನಂತರ ಮೈಸೂರು ತಲುಪುತ್ತಿದೆ, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ ಎಂಬ ವಿಷಯವನ್ನು ಹೋರಾಟ ಸಮಿತಿ ಪದಾಧಿಕಾರಿಗಳು ಗಮನಕ್ಕೆ ತಂದಾಗ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು.

ಈಗ ಸಂಚರಿಸುತ್ತಿರುವ ಮೈಸೂರು-ತಾಳಗುಪ್ಪ ರೈಲನ್ನು ನಿಲ್ಲಿಸುವ ಯಾವುದೇ ಪ್ರಸ್ತಾಪ ಇಲ್ಲ. ಅಂತಹ ಸಂದರ್ಭ ಬಂದರೆ ಶಿವಮೊಗ್ಗದಿಂದ ಬೇರೆ ರೈಲಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈಲ್ವೆ ಇಲಾಖೆಯ ಸೀನಿಯರ್ ಮ್ಯಾನೇಜರ್ ಡಾ.ಅನೂಪ್ ದಯಾನಂದ್ ಸಂದೂ, ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ, ಸಿ. ಗೋಪಾಲಕೃಷ್ಣ ರಾವ್, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ, ಸದಸ್ಯ ಟಿ.ಡಿ. ಮೇಘರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕಾಗೋಡು ಅಣ್ಣಪ್ಪ, ಸುಳಗೋಡು ಗಣಪತಿ, ಕುಮಾರ್ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.