ADVERTISEMENT

ಕೊಡಚಾದ್ರಿ ಯುವ ವೇದಿಕೆ ಉದ್ಘಾಟನೆ ನೆರವೇರಿಸಿ ಮಂಜುನಾಥಗೌಡ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 10:25 IST
Last Updated 17 ಅಕ್ಟೋಬರ್ 2012, 10:25 IST

ರಿಪ್ಪನ್‌ಪೇಟೆ: ಸಹಕಾರಿ ಸಂಸ್ಥೆ ರೂಪಿಸಿರುವ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಕೊಡಚಾದ್ರಿ ವೈಭವ ತೀರ್ಥಹಳ್ಳಿಯಲ್ಲಿ ಅ. 25ರಿಂದ 27ರವರೆಗೆ ನಡೆಯಲಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.

ಸಮೀಪದ ಅಮೃತ ಗ್ರಾಮದ ಸಹಕಾರಿ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಕೊಡಚಾದ್ರಿ ಯುವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಜಾಮೀನುರಹಿತವಾಗಿ ರೂ 1.65 ಲಕ್ಷ ಕೋಟಿಯನ್ನು ಸ್ವಸಹಾಯ ಗುಂಪುಗಳಿಗೆ ನೀಡಿದ್ದು, ಜಿಲ್ಲೆಯಲ್ಲಿಯೂ ರೂ 126 ಕೋಟಿ ಸಾಲ ನೀಡಲಾಗಿದೆ. ಅಲ್ಲದೇ, ರೈತರಿಗೆ ನೀಡುತ್ತಿದ್ದ ಬಡ್ಡಿರಹಿತ ಸಾಲವನ್ನರೂ 1ಲಕ್ಷದಿಂದ ರೂ 3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಸಹಕಾರಿ ಸಂಸ್ಥೆಯ ಹೆಗ್ಗಳಿಕೆ ಎಂದು ತಿಳಿಸಿದರು.

ಗಂಡು- ಹೆಣ್ಣು ತಾರತಮ್ಯ, ಜಾತಿ ಮತ್ತು ಪಕ್ಷ ರಾಜಕೀಯ ಹೊರತಾಗಿ ಸಹಕಾರಿ ಸಂಸ್ಥೆ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ಸಹಕಾರಿ ಶಕ್ತಿ ಬೆಳವಣಿಗೆ ಸಾಧ್ಯ. ಕೊಡಚಾದ್ರಿ ವೈಭವದ ಮೂಲಕ ಗೃಹಪಯೋಗಿ ವಸ್ತುಗಳ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದೆ. ಸಾಲ ಮರು ಪಾವತಿಯಲ್ಲಿ ಮಹಿಳೆಯರು ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಮಂಜುನಾಥ ಗೌಡ ಶ್ಲಾಘಿಸಿದರು. 

 ಅಮೃತ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಂ. ವರ್ತೇಶ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಪಿ. ರಮೇಶ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗೀತಾ ಲಿಂಗಪ್ಪ, ಜಿಲ್ಲಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ರಾಜೇಶ್ವರಿ, ಹರತಾಳು ನಾಗರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾದ ಕೆ.ಜಿ. ಬಸಪ್ಪ, ಕೆ.ಎಸ್. ಲೋಕಪ್ಪಗೌಡ ಹಾಜರಿದ್ದರು.

ಸವಿತಾ ಪ್ರಾರ್ಥಿಸಿದರು, ಕೆ.ವೈ. ಷಣ್ಮುಖಪ್ಪ ಸ್ವಾಗತಿಸಿದರು. ಬಷೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಸ್. ಅನಂತಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.