ADVERTISEMENT

ಕ್ಯಾಸೆಟ್‌ಗಾಗಿ ಕವಿತೆ ಬರೆದಿಲ್ಲ: ಲಕ್ಷ್ಮೀನಾರಾಯಣ ಭಟ್ಟರ ಸ್ಪಷ್ಟೋಕ್ತಿ

ಸಂದರ್ಶನ:‘ಭಾವಗೀತೆ ರಚಿಸುವವರಿಗೆ ಲಯ ಜ್ಞಾನ ಬೇಕು’

ಪ್ರಕಾಶ ಕುಗ್ವೆ
Published 4 ಫೆಬ್ರುವರಿ 2014, 6:00 IST
Last Updated 4 ಫೆಬ್ರುವರಿ 2014, 6:00 IST

ಶಿವಮೊಗ್ಗ: ಕವಿ ಡಾ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರು 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಶಿವಮೊಗ್ಗ ನಗರದವೇ ಆದ ಭಟ್ಟರು, ಬಾಲ್ಯ ಮತ್ತು ತಮ್ಮ ಯೌವನದ ಹೊಸ್ತಿಲು ದಾಟಿದ್ದು ಕೋಟೆ ರಸ್ತೆಯ ಆವರಣದಲ್ಲಿ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರೊಂದು ಪ್ರತಿಭೆಯಾಗಿ ಹೊರಹೊಮ್ಮಲು ಶಿವಮೊಗ್ಗ ಸಾಹಿತ್ಯಿಕ ವಾತಾವರಣದ ಕೊಡುಗೆ ಬಹಳಷ್ಟಿದೆ.
  ಭಾವಗೀತೆ, ಅನುವಾದ, ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಭಟ್ಟರಿಗೆ ಸಿಕ್ಕ ಪ್ರಶಸ್ತಿಗಳು ಹಲವು.

ಸಾಹಿತ್ಯ ಕ್ಷೇತ್ರದಲ್ಲಿ ಈಗಲೂ ಸಕ್ರಿಯರಾಗಿರುವ ಭಟ್ಟರು, ಎರಡು ವರ್ಷದ ಹಿಂದೆ ಶಿವಮೊಗ್ಗದ ದಸರಾ ಹಬ್ಬಕ್ಕಾಗಿಯೇ ಅವರು ರಚಿಸಿದ ಗೀತೆ, ಒಂದು ರೀತಿಯಲ್ಲಿ ಜಿಲ್ಲೆಯ ಪ್ರಾತಿನಿಧಿಕ ಗೀತೆಯಾಗಿ ಮಾರ್ಪಾಡಾಗಿದೆ. ಸದ್ಯ ಬೆಂಗಳೂರಿನ ಬನಶಂಕರಿಯಲ್ಲಿ  78 ವರ್ಷ ವಯಸ್ಸಿನ ಭಟ್ಟರು ಹೆಂಡತಿ ಜ್ಯೋತಿ, ಮಗ–ಚೈತ್ರ, ಮಗಳು ಕ್ಷಮಾ ಜೊತೆ ನೆಲೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾರ್ಚ್‌ 8 ಮತ್ತು 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ತಕ್ಷಣದ ಪ್ರತಿಕ್ರಿಯೆ ಏನು?
–ಶಿವಮೊಗ್ಗ ನನ್ನ ತವರು ಮನೆ. ತವರು ನೆಲದ ಈ ಉಡುಗೊರೆ ಯಿಂದ ಸಂತೋಷ ಉಕ್ಕಿ ಬಂದಿದೆ. ಈ ಆಯ್ಕೆ ನನ್ನ ಪಾಲಿಗೆ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದಷ್ಟೇ ಮಹತ್ವದ್ದು. ಅದರಲ್ಲೂ ಯಾವುದೇ ಪ್ರತಿರೋಧ ಇಲ್ಲದೆ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿರುವುದು ಸಹಜವಾಗಿ ಖುಷಿ ತಂದಿದೆ.

ನನ್ನ ಬಾಲ್ಯವನ್ನು ಕಳೆದಿದ್ದು ಶಿವಮೊಗ್ಗದಲ್ಲಿ; 18 ವರ್ಷ ಶಿವಮೊಗ್ಗದಲ್ಲಿ ಬಹಳ ಕಷ್ಟಪಟ್ಟು ಓದಿ ಬೆಳೆದೆ. ಇಲ್ಲಿನ ಸಾಹಿತ್ಯದ ವಾತಾವರಣ ನನ್ನನ್ನು ಬೆಳೆಸಿತು ಎನ್ನುವುದು ಅತಿಶಯೋಕ್ತಿ ಅಲ್ಲ.

* ಸಮ್ಮೇಳನದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದುಕೊಂಡಿದ್ದೀರಿ?
– ಕನ್ನಡ ಬಹಳ ಪ್ರಾಚೀನವಾದ ಭಾಷೆ. ಅದರಲ್ಲೂ ಶಿವಮೊಗ್ಗ ಜಿಲ್ಲೆ ಅಲ್ಲಮ, ಅಕ್ಕಮಹಾದೇವಿ ಹುಟ್ಟಿ, ಬೆಳೆದ ಜಾಗ. ಮಧುಕೇಶ್ವರ ಇರುವ ಸ್ಥಳ. ಕುವೆಂಪು ಅವರನ್ನು ಮೊದಲುಗೊಂಡು ಕನ್ನಡದ ಬಹಳ ಪ್ರಸಿದ್ಧರು ರೂಪುಗೊಂಡ ಪ್ರದೇಶ.

ಇದರ ಹೆಮ್ಮೆ–ಗರಿಮೆ ಗಳನ್ನು ಅಧ್ಯಕ್ಷನಾಗಿ ಪ್ರಸ್ತಾಪಿಸುತ್ತೇನೆ. ಬಾಯಿಯಿಂದ ಕಳಚಿ ಬೀಳುತ್ತಿರುವ ಕನ್ನಡವನ್ನು ಮತ್ತೆ ಬಾಯಿಯಲ್ಲಿ ಮೆಲುಕು ಹಾಕುವಂತೆ ಸಲಹೆ ನೀಡುತ್ತೇನೆ. ಸಾಹಿತ್ಯಕ್ಕೆ ಮಾತ್ರ ನನ್ನ ಮಾತುಗಳನ್ನು ಸೀಮಿತಗೊಳಿಸಿಕೊಳ್ಳುತ್ತೇನೆ.

* ಭಾವಗೀತೆ ರಚನೆಗೆ ಸ್ಫೂರ್ತಿ, ಪ್ರೇರಣೆಗಳೇನು?
– ಅವಾಗ ನವ್ಯ ಕಾವ್ಯದ ಅಬ್ಬರದ ಕಾಲ. ಸಾಮಾನ್ಯ ಜನರಿಗೆ ಕಾವ್ಯ ಅರ್ಥವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಜನರಿಗೆ ಅರ್ಥವಾಗುವ ಹಾಗೆ ಬರೆಯಬೇಕು ಎಂದು ಹೊರಟೆ; ಇದೇ ಸಂದರ್ಭದಲ್ಲಿ ಮೈಸೂರು ಅನಂತಸ್ವಾಮಿ ಮತ್ತಿತರ ಗಾಯಕರು ಹಾಡಲು ಬೇಕಾದಂತಹ ಕವಿತೆ ನೀಡಿ ಎನ್ನುತ್ತಿದ್ದರು.

ಇದುವರೆಗೂ 450 ಭಾವಗೀತೆಗಳನ್ನು ಬರೆದಿದ್ದೇನೆ. 16 ಕ್ಯಾಸೆಟ್‌ಗಳಾಗಿವೆ. 4 ಮಕ್ಕಳ ಗೀತೆಗಳ ಕ್ಯಾಸೆಟ್‌ಗಳಾಗಿವೆ. ಗಾಯಕರಿಂದ ನಾವು, ಎಲ್ಲರ ಮನೆ ಮಾತಾದೆವು.

* ನಿಮ್ಮನ್ನೂ ಸಾಹಿತ್ಯವಲಯದಲ್ಲಿ ಕ್ಯಾಸೆಟ್‌ಕವಿ ಎಂದು ಕರೆದಿದ್ದು ಏಕೆ?
– ನಾವು ಕ್ಯಾಸೆಟ್‌ಗಾಗಿ ಕವಿತೆ ಬರೆದಿಲ್ಲ. ಹಾಗೆ ಬರೆಯಬಾರದು ಎಂದುಕೊಂಡವರಲ್ಲಿ ನಾನೂ ಒಬ್ಬ. ನಾವು ಬರೆದಾಗ ಕ್ಯಾಸೆಟ್‌ಗಳೇ ಇರಲಿಲ್ಲ; ಆಮೇಲೆ ಬಂದವು. ನಮಗೆ ಆಗದವರು ಹೀಗೆ ಗೇಲಿ ಮಾಡಿದರಷ್ಟೇ.

* ಇಂದು ಕವಿಗಳಿದ್ದಾರೆ; ಗಾಯಕರೂ ಇದ್ದಾರೆ. ಅತ್ಯುತ್ತಮ ಭಾವಗೀತೆಗಳೇಕೆ ರೂಪುಗೊಳ್ಳುತ್ತಿಲ್ಲ?
– ನಮ್ಮಲ್ಲಿ ಅತ್ಯುತ್ತಮ ಹಾಡುಗಾರರಿದ್ದಾರೆ. ಆದರೆ, ಕವಿಗಳಿಂದ ಉತ್ತಮ ಭಾವಗೀತೆಗಳು ಸೃಷ್ಟಿಯಾಗುತ್ತಿಲ್ಲ. ಭಾವಗೀತೆಗೆ ಲಯ ಜ್ಞಾನ ಬೇಕು. ಆಡು ಮಾತಿನಂತಿದ್ದರೆ ಕವಿತೆಯಾಗುತ್ತದೆಯೇ? ಅದಕ್ಕೂ ಒಂದು ಲಯ ಬೇಕು ಎನ್ನುವುದು ನಿಜ. ‘

ಇಂದಿನ ಬಹಳಷ್ಟು ಕವನಗಳಲ್ಲಿ ಲಯ, ಛಂದಸ್ಸು ಯಾವುದೂ ಇರುವುದಿಲ್ಲ. ಹಾಗಾಗಿ, ಉತ್ತಮ ಭಾವಗೀತೆಗಳು ಸೃಷ್ಟಿಯಾಗುತ್ತಿಲ್ಲ.

* ಸಾಹಿತ್ಯ ಕ್ಷೇತ್ರದಲ್ಲಿನ ಇತ್ತೀಚಿನ ಕೆಲಸಗಳ ಬಗ್ಗೆ ವಿವರಿಸಿ?
– ಎರಡೂವರೆ ವರ್ಷದ ಹಿಂದೆ ರಮಣ ಮಹರ್ಷಿಗಳ ಬಗ್ಗೆ ಸಮಗ್ರ ಪುಸ್ತಕವನ್ನು ತಂದೆ. ಅವರ ಜೀವನಚರಿತ್ರೆ, ಉಪನ್ಯಾಸ ಕುರಿತಂತೆ ಕನ್ನಡದಲ್ಲೇ ಇಷ್ಟು ಸಮಗ್ರ ಮಾಹಿತಿ ಇರುವ ಪುಸ್ತಕ ಇದೊಂದೇ. ಷೇಕ್ಸ್‌ಪಿಯರ್‌, ಡಬ್ಲ್ಯೂ ಯೇಟ್ಸ್, ಟಿ.ಎಸ್.ಎಲಿಯಟ್ ಅವರ ಮೂಲ ಕವನಗಳೊಂದಿಗೆ ಅನುವಾದ ಮಾಡಿದ ಕವಿತೆಗಳ ಸಮಗ್ರ ಕವನ ಸಂಕಲನ ಸದ್ಯದಲ್ಲೇ ಹೊರಬರಲಿದೆ.

ADVERTISEMENT

ಮೂವರ ಒಟ್ಟು 170 ಕವನಗಳು ಈ ಸಂಗ್ರಹದಲ್ಲಿ ಒಟ್ಟಿಗೆ ಸಿಗಲಿವೆ. ಹಾಗೆಯೇ,  ಸುಮಾರು 450 ಪುಟಗಳ ‘ಕನ್ನಡ ಸಮಗ್ರ ಸಾಹಿತ್ಯ ಚರಿತ್ರೆ’ ಈಗಷ್ಟೇ ಮುಗಿದಿದ್ದು, ಅದು ಮುಗಿಯುತ್ತಿದ್ದಂತೆ ನನಗೆ ‘ಬಿ.ಎಂ.ಶ್ರೀ.’ ಪ್ರಶಸ್ತಿ ಘೋಷಣೆಯಾಗಿದೆ. ಅದರ ಜತೆ ಸಮ್ಮೇಳನದ ಈ ಅಧ್ಯಕ್ಷ ಸ್ಥಾನವೂ ದಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.