ADVERTISEMENT

ಕ್ಷೇತ್ರದ ಘನತೆ ಕಾಪಾಡಿದ ಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 9:28 IST
Last Updated 20 ಅಕ್ಟೋಬರ್ 2017, 9:28 IST

ತೀರ್ಥಹಳ್ಳಿ: ‘ತಾಲ್ಲೂಕಿನಲ್ಲಿ ಅನೇಕ ಮಂದಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೆಲ್ಲರ ಆಶಯದಂತೆ ಕಾರ್ಯನಿರ್ವಹಿಸಿದ್ದೇನೆ. ಶಾಸಕನಾಗಿ ಕ್ಷೇತ್ರದ ಘನತೆಯನ್ನು ಕಾಪಾಡಿದ್ದೇನೆ’ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು. ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಕ್ಷದಲ್ಲಿ ಸಕ್ರಿಯರಾಗಿದ್ದ ಎಚ್‌.ಎಚ್‌.ಮಂಜಪ್ಪಗೌಡ ಅವರು ಎಲ್ಲ ಬಡವರು ತಾಲ್ಲೂಕು ಬೋರ್ಡ್‌ ಕಚೇರಿಗೆ ಕಾಲಿಡುವಂತೆ ಮಾಡಿದ್ದರು. ಅವರ ಪುತ್ರ ಹೆದ್ದೂರು ಧನಂಜಯ ಅವರು ಇಂದು ಕಾಂಗ್ರೆಸ್‌ಗೆ ಸೇರುತ್ತಿರುವುದು ಪಕ್ಷಕ್ಕೆ ಹೊಸ ಚೈತನ್ಯ ಲಭಿಸಿದಂತಾಗಿದೆ’ ಎಂದರು.

ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಚ್.ಎಚ್‌.ಮಂಜಪ್ಪಗೌಡ ಹಿರಿಯ ಗಾಂಧಿವಾದಿಗಳಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಗಾಂಧಿ ಜಯಂತಿಯನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಿದ್ದರು. ಇಳಿವಯಸ್ಸಿನಲ್ಲೂ ತಮ್ಮ ಮನೆಯಲ್ಲಿಯೇ ಗಾಂಧಿ ಜಯಂತಿ ಆಚರಿಸುವ ಮೂಲಕ ದೇಶ ಪ್ರೇಮೆ ಮೆರೆದಿದ್ದರು ಎಂದು ಕಿಮ್ಮನೆ ಸ್ಮರಿಸಿದರು.

ADVERTISEMENT

‘ಶಾಸಕನಾಗಿ, ಸಚಿವನಾಗಿ ನನ್ನ ಕಾರ್ಯನಿರ್ವಹಣೆಯನ್ನು ಗಮನಿಸಿ ಧನಂಜಯ ಅವರು ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ. ಹೆದ್ದೂರಿನಲ್ಲಿ ನವೆಂಬರ್‌ ಅಂತ್ಯದೊಳಗೆ ಕಾಂಗ್ರೆಸ್‌ ಪಕ್ಷದ ಕಚೇರಿ ಆರಂಭಿಸಲಿದ್ದು, ಆ ಭಾಗದ ಜವಾಬ್ದಾರಿಯನ್ನು ಧನಂಜಯ ನಿರ್ವಹಿಸಲಿದ್ದಾರೆ’ ಎಂದು ಕಿಮ್ಮನೆ ಹೇಳಿದರು.

ಹೆದ್ದೂರು ಧನಂಜಯ ಮಾತನಾಡಿ, ‘ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ಕಾಂಗ್ರೆಸ್‌ ಸೇರಲು ನನ್ನ ತಂದೆಯೇ ಪ್ರೇರಣೆಯಾಗಿದ್ದಾರೆ. ಕಿಮ್ಮನೆ ರತ್ನಾಕರ ಅವರ ಬಗ್ಗೆ ಅಭಿಮಾನವಿತ್ತು. ತಂದೆ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಕಾರಣಕ್ಕೆ ಕಾಂಗ್ರೆಸ್‌ ಸೇರುತ್ತಿದ್ದೇನೆ’ ಎಂದು ಹೇಳಿದರು.

‘ಒಳ್ಳೆಯ ಶಾಸಕರನ್ನು ಯಾವಾಗಲೂ ಕಳೆದುಕೊಳ್ಳಬಾರದು. ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡುವ ಪರಂಪರೆಯನ್ನು ಕಾಪಾಡಿಕೊಳ್ಳಬೇಕು. ಒಳ್ಳೆಯ ವ್ಯಕ್ತಿತ್ವದವರನ್ನು ಪೋಷಣೆ ಮಾಡಬೇಕು. ಕಾಂಗ್ರೆಸ್‌ ಎಲ್ಲರಿಗೂ ಅವಕಾಶವನ್ನು ನೀಡುವ ಪಕ್ಷವಾಗಿದೆ’ ಎಂದು ಧನಂಜಯ ಹೇಳಿದರು.

ಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರ್‌ ಮಂಜುನಾಥ್‌, ಪಟ್ಟಣ ಆಶ್ರಯ ಸಮಿತಿ ಅಧ್ಯಕ್ಷ ಡಿ.ಎಸ್‌.ವಿಶ್ವನಾಥಶೆಟ್ಟಿ ಮಾತನಾಡಿದರು. ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಲ್‌.ಸುಂದರೇಶ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಳಕೆರೆ ದಿವಾಕರ್‌, ಮುಖಂಡರಾದ ಹಾರೋಗೊಳಿಗೆ ಪದ್ಮನಾಭ್‌, ವಿಲಿಯಂ ಮಾರ್ಟಿಸ್‌, ಆಮ್ರಪಾಲಿ ಸುರೇಶ್‌, ಕುಡುಮಲ್ಲಿಗೆ ರಮೇಶ್‌ಶೆಟ್ಟಿ ಹಾಜರಿದ್ದರು. ಹೆದ್ದೂರು ಬಿಜೆಪಿ ಬೂತ್‌ ಕಮಿಟಿ ಅಧ್ಯಕ್ಷ ತಿಮ್ಮಪ್ಪ, ಯುವ ಮುಖಂಡ ತಿಲಕ್‌ ಅವರೂ ಕಾಂಗ್ರೆಸ್‌ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.