ADVERTISEMENT

ಗೀತಾ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 5:40 IST
Last Updated 9 ಅಕ್ಟೋಬರ್ 2012, 5:40 IST

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿಯ 2ನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿಯ ಸೊರಬ ತಾಲ್ಲೂಕಿನ ಅನವಟ್ಟಿ ಕ್ಷೇತ್ರದ ಗೀತಾ ಬಿ. ಮಲ್ಲಿಕಾರ್ಜುನ್ ಹಾಗೂ ಭದ್ರಾವತಿ ತಾಲ್ಲೂಕಿನ ಆನವೇರಿ ಕ್ಷೇತ್ರದ ಹೇಮಾ ಪಾವನಿ ಆಯ್ಕೆಯಾಗಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯ್ತಿಯಲ್ಲಿ 2ನೇ ಅವಧಿಗಾಗಿ ಚುನಾವಣೆ ನಿಗದಿಯಾಗಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಕೆ. ಶಿವರಾಂ ಸಮಯ ನಿಗದಿ ಪಡಿಸಿದ್ದರು.

ಬಿಜೆಪಿಯ ಆನವಟ್ಟಿ ಕ್ಷೇತ್ರದ ಗೀತಾ ಬಿ. ಮಲ್ಲಿಕಾರ್ಜುನ್ ಹಾಗೂ ಹೊಳಲೂರು ಕ್ಷೇತ್ರದ ಗಾಯಿತ್ರಿ ಷಣ್ಮುಖಪ್ಪ, ಕಾಂಗ್ರೆಸ್‌ನ ಹೊಸನಗರ ಕ್ಷೇತ್ರ ಜ್ಯೋತಿ ಚಂದ್ರಮೌಳಿ ಉಮೇದುವಾರಿಕೆ ಸಲ್ಲಿಸಿದರು. ಗಾಯತ್ರಿ ಷಣ್ಮುಖಪ್ಪ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಗೀತಾ ಮಲ್ಲಿಕಾರ್ಜುನ ಹಾಗೂ ಜ್ಯೋತಿ ಚಂದ್ರಮೌಳಿ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದರು.

ಒಟ್ಟು 31 ಸದಸ್ಯ ಬಲದ ಶಿವಮೊಗ್ಗ ಜಿಲ್ಲಾ  ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೀತಾ ಬಿ. ಮಲ್ಲಿಕಾರ್ಜುನ್ 16 ಮತ ಗಳಿಸುವ ಮೂಲಕ ಕಾಂಗ್ರೆಸ್‌ನ ಜ್ಯೋತಿ ಚಂದ್ರಮೌಳಿ ಅವರನ್ನು ಪರಾ ಜಯಗೊಳಿಸಿ ಚುನಾಯಿತರಾದರು. ಜ್ಯೋತಿ ಚಂದ್ರಮೌಳಿ ಅವರು ಕಾಂಗ್ರೆಸ್‌ನ 13 ಹಾಗೂ ಜೆಡಿಎಸ್‌ನ 2 ಒಟ್ಟು 15 ಮತ ಗಳಿಸಿದರು.

2ನೇ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್‌ನ ತಾಳಗುಪ್ಪ  ಕ್ಷೇತ್ರದ ಲಲಿತಾ ನಾರಾಯಣ್ ಹಾಗೂ ಬಿಜೆಪಿಯ ಆನವೇರಿ ಕ್ಷೇತ್ರದ ಹೇಮಾ ಪಾವನಿ ಉಮೇದುವಾರಿಕೆ ಸಲ್ಲಿಸಿದ್ದರು.
ಈ ಚುನಾವಣೆಯಲ್ಲಿ ಹೇಮಾ ಪಾವನಿ 16 ಮತಗಳಿಸಿ,  ಆಯ್ಕೆಯಾದರು.

ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಲಲಿತಾ ನಾರಾಯಣ 15 ಮತಗಳನ್ನು ಗಳಿಸಿದರು.
ಸಹಾಯಕ ಪ್ರಾದೇಶಿಕ ಆಯುಕ್ತ ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಚುನಾವಣಾ ತಹಶೀಲ್ದಾರ್ ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.