ADVERTISEMENT

‘ಗೋದಾಮಿನ ಪ್ರಯೋಜನ ರೈತರಿಗೆ ಸಿಗಲಿ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:27 IST
Last Updated 24 ಡಿಸೆಂಬರ್ 2017, 5:27 IST

ಹೊಳೆಹೊನ್ನೂರು: ರೈತರ ಬೆಳೆ ಸಂಗ್ರಹಣೆ ಮಾಡಲು ಸರ್ಕಾರದಿಂದ ನಿರ್ಮಿಸುವ ಗೋದಾಮುಗಳ ಸದ್ಬಳಕೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಹೇಳಿದರು.

ಪಟ್ಟಣದ ಭದ್ರಾವತಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಸುಮಾರು ನಿರ್ಮಿಸಲು ಉದ್ದೇಶಿಸಿರುವ, ಒಂದು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಕಾಮಗಾರಿಗೆ ಈಚೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರು ಬೆಳೆದ ಫಸಲು ಸಂಗ್ರಹಿಸಲು ಸಾಧ್ಯವಾಗದೆ ಕಟಾವು ಆದ ತಕ್ಷಣವೇ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಂತಹ ಗೋದಾಮುಗಳನ್ನು ನಿರ್ಮಿಸಿ ರೈತರ ಕೃಷಿ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಿಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು.

ADVERTISEMENT

ಭದ್ರಾವತಿ ಎಪಿಎಂಸಿ ಅಧ್ಯಕ್ಷ ಡಿ.ಜಯರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯು ಸ್ವತಂತ್ರ ಮಾರುಕಟ್ಟೆಯಾಗುವ ಎಲ್ಲ ಲಕ್ಷಣ ಹೊಂದಿದೆ. ಇದಕ್ಕೆ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು. ರೈತರು ಈ ಮಾರುಕಟ್ಟೆಯ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಸದಸ್ಯ ಅರಹತೊಳಲು ಚಂದ್ರಣ್ಣ ಮಾತನಾಡಿ, ‘ರೈತರಿಂದ ಸಂಗ್ರಹಿಸಿದ ಹಣವನ್ನು ರೈತರ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗ ಮಾಡಲು ಅನುವು ಮಾಡಿಕೊಡಬೇಕು. ಇದಕ್ಕೆ ಸರ‌ಕಾರದ ಮಟ್ಟದಲ್ಲಿ ಶಾಸಕರು ಚರ್ಚಿಸಬೇಕು. ಅಭಿವೃದ್ಧಿ ಕೆಲಸ ಮಾಡಲು ಎಪಿಎಂಸಿ ಸದಸ್ಯರಿಗೆ ಅತ್ಯಂತ ಕಡಿಮೆ ಅನುದಾನ ನೀಡಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್.ರೇಖಾ ಉಮೇಶ್, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಎಂ.ನಾಗೇಶ್, ಸದಸ್ಯ ಆರ್.ಉಮೇಶ್, ಯು.ಕೆ.ವೆಂಕಟೇಶ್, ಬಸವರಾಜ್, ನರಸಿಂಹ, ಎಪಿಎಂಸಿ ಸದಸ್ಯರಾದ ಎಸ್.ಆರ್.ಸತೀಶ್, ಎಚ್.ಆರ್.ತಿಮ್ಮಪ್ಪ, ಡಾ.ಎಚ್.ನಾಗೇಶ್  ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.