ADVERTISEMENT

ಚೆಕ್ ಡ್ಯಾಂ, ಗೋಕಟ್ಟೆಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಹರಪನಹಳ್ಳಿ: ಗ್ರಾ.ಪಂ., ಮಹಿಳಾ ಸ್ವಸಹಾಯ ಸಂಘ ಹಾಗೂ ಸ್ವಯಂಸೇವಾ ಸಂಘದ ನೆರವಿನೊಂದಿಗೆ ಜಲಾನಯನ ಇಲಾಖೆ ರೈತರ ಜಮೀನುಗಳಲ್ಲಿ ಬದು, ಚೆಕ್‌ಡ್ಯಾಂ ಹಾಗೂ ಗೋಕಟ್ಟೆ ನಿರ್ಮಾಣ ಸೇರಿದಂತೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಶೇ. 90ರಷ್ಟು ಅನುದಾನ ಒದಗಿಸಲಿದೆ ಎಂದು ಜಲಾನಯನ ಇಲಾಖೆಯ ಅಧಿಕಾರಿ ಎಂ. ಚನ್ನನಗೌಡ ತಿಳಿಸಿದರು.

ಮಂಗಳವಾರ ತಾಲ್ಲೂಕಿನ ಹೊಸಕೋಟೆ ಗ್ರಾ.ಪಂ. ಕಚೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಾಲ್ಲೂಕಿನ ಅರಸೀಕೆರೆ, ಹೊಸಕೋಟೆ, ತೌಡೂರು ಹಾಗೂ ನಿಚ್ಚವ್ವನಹಳ್ಳಿ ಸೇರಿದಂತೆ 4 ಗ್ರಾ.ಪಂ.ಗಳ ವ್ಯಾಪ್ತಿಯ ಮೊದಲ ಹಂತದಲ್ಲಿ 5ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
 
ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುವ ಈ ಯೋಜನೆಗಾಗಿ ಕೇಂದ್ರ ಸರ್ಕಾರ ಶೇ. 90ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 10ರಷ್ಟು ಅನುದಾನ ನೀಡುತ್ತಿದ್ದು, ಯೋಜನೆಯ ಉಪಯೋಗ ಬಯಸುವ ಫಲಾನುಭವಿ ರೈತರು ಶೇ.10ರಷ್ಟು ವಂತಿಗೆ ಹಣವನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಗೋವಿಂದನಾಯ್ಕ ಮಾತನಾಡಿ, ಯೋಜನೆಯ ಅಡಿಯಲ್ಲಿ ರೈತರ ನೀರಾವರಿ ಜಮೀನುಗಳಲ್ಲಿ ತೆಂಗು, ಮಾವು, ಸಪೋಟ, ಲಿಂಬೆ ಹಾಗೂ ನುಗ್ಗೆ ಸಸಿ ಸೇರಿದಂತೆ ಔಷಧಿ ತಯಾರಿಕೆಯ ಸಸ್ಯಗಳನ್ನು ಉಚಿತವಾಗಿ ವಿತರಿಸಲಾಗುವುದು. ಫಲಾನುಭವಿ ರೈತರು 2.5 ಹೆಕ್ಟೇರ್ ಪ್ರದೇಶದಲ್ಲಿ ಈ ಸಸಿಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಕೆರೆಗುಡಿಹಳ್ಳಿ, ಹೊಸಕೋಟೆ ಹಾಗೂ ಬೂದಿಹಾಳ್ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಇಂದಿರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮಪ್ಪ, ಸದಸ್ಯರಾದ ಗುಡಿಹಳ್ಳಿ ಹಾಲೇಶ್, ಎಸ್. ದೇವಿರಮ್ಮ, ಬೂದಿಹಾಳ್ ಲೋಕೇಶ್, ದ್ಯಾಮಕ್ಕ, ಬೂದಿಹಾಳ್ ಉಮೇಶ್, ಎಚ್. ಶರಣಪ್ಪ ಉಪಸ್ಥಿತರಿದ್ದರು.ಕೃಷಿ ಸಹಾಯಕರಾದ ಜಿ. ಕೊಟ್ರಪ್ಪ ಸ್ವಾಗತಿಸಿದರು. ನಾಗೇಂದ್ರಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.