ADVERTISEMENT

ಜಾಗತಿಕ ಸಾಮ್ರಾಜ್ಯಶಾಹಿಯಿಂದ ಅಗೋಚರ ಸುಲಿಗೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 5:21 IST
Last Updated 22 ಡಿಸೆಂಬರ್ 2017, 5:21 IST
ಶಿವಮೊಗ್ಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ರೈತರಿಗೆ ಭರವಸೆ ತುಂಬುವ ದಿನ’ ರಾಜ್ಯಮಟ್ಟದ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು
ಶಿವಮೊಗ್ಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ರೈತರಿಗೆ ಭರವಸೆ ತುಂಬುವ ದಿನ’ ರಾಜ್ಯಮಟ್ಟದ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು   

ಶಿವಮೊಗ್ಗ: ಜಾಗತಿಕ ಸಾಮ್ರಾಜ್ಯಶಾಹಿಗಳ ವಿರುದ್ಧ ರೈತರು ಇಂದು ಹೋರಾಟ ಆರಂಭಿಸಬೇಕಾಗಿದೆ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗುರುವಾರ ರಾಜ್ಯ ರೈತ ಸಂಘದ ಸಂಸ್ಥಾಪಕ ಎಂ.ಡಿ.ಸುಂದರೇಶ್ ಅವರ 25ನೇ ನೆನಪಿನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ರೈತರಿಗೆ ಭರವಸೆ ತುಂಬುವ ದಿನ’ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿದ ಸಾಲ ಪಾವತಿಯಾಗದೆ ಅದನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಲಾಗಿದೆ. ಆದರೆ, ಬಡವರ ಸಾಲವನ್ನು ಜಪ್ತಿ ಮಾಡುವ ಸಾಲವೆಂದು ಪರಿಗಣಿಸಲಾಗಿದೆ. ಕಾರ್ಪೊರೇಟ್ ಸಾಮ್ರಾಜ್ಯಶಾಹಿಗಳಿಗೆ ಕೊಟ್ಟ ಸಾಲ ಸಂಪತ್ತಾಗಿದ್ದರೆ, ರೈತನ ಸಾಲ ಜವಾಬ್ದಾರಿಯ ಸಾಲವನ್ನಾಗಿ ಪರಿಗಣಿಸಲಾಗುತ್ತಿದೆ. ಈ ಸುಲಿಗೆಯ ವಿರುದ್ಧ ರೈತರು ಇಂದು ಹೋರಾಡಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

‘1990ರ ಹಿಂದಿನ ಸಾಮ್ರಾಜ್ಯಶಾಹಿಗಳಿಂದ ಸುಲಿಗೆ ಕಣ್ಣಿಗೆ ಕಾಣುತ್ತಿತ್ತು. ನಮ್ಮನ್ನು ನೇರವಾಗಿ ಗುಲಾಮರನ್ನಾಗಿ ಮಾಡುತ್ತಿದ್ದವು. ಆದರೆ, ಈಚೆಗೆ ಜಾಗತಿಕ ಸಾಮ್ರಾಜ್ಯಶಾಹಿ ಅಗೋಚರವಾಗಿದೆ. ನಾವೇ ಅವರಿಗೆ ಶರಣಾಗುವಂತೆ ಮಾಡಿದೆ. ಅದು ಮಾಡುತ್ತಿರುವ ಸುಲಿಗೆ ಯಾರ ಕಣ್ಣಿಗೂ ಕಾಣುತ್ತಿಲ್ಲ. ಜಾಗತಿಕ ಸಾಮ್ರಾಜ್ಯಶಾಹಿಯ ಸುಲಿಗೆ ನಿಲ್ಲದ ಹೊರತು ರೈತರ ಸಾಲಮನ್ನಾ, ವೈಜ್ಞಾನಿಕ ಬೆಲೆ ದಕ್ಕಿದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ’ ಎಂದರು.

ADVERTISEMENT

ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘ಇಂದು ರಾಜಕಾರಣದಲ್ಲಿ ಧರ್ಮ, ಜಾತಿಗಳು ವಿಜೃಂಭಿಸುತ್ತಿವೆ. ಉಪಯೋಗವಿಲ್ಲದ ಧರ್ಮಗಳ ವಿಚಾರಗಳು ಮೆರೆಯುತ್ತಿವೆ. ಎಲ್ಲ ಧರ್ಮಗಳಿಗಿಂತ ಮುಖ್ಯವಾದುದು ರೈತ ಧರ್ಮ’ ಎಂದರು.

ಅದ್ಭುತ ಚಳವಳಿಗಳನ್ನು ಸುಂದರೇಶ್ ಕೈಗೊಂಡಿದ್ದರು. ವಿಧಾನಸೌಧದಲ್ಲಿ ಹಸಿರು ಭಾವುಟ ಹಾರಾಡಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಹಸಿರು ಬಾವುಟದ ಬದಲು ಬೇರೆ ಎಲ್ಲಾ ಬಾವುಟಗಳು ಹಾರಾಡುತ್ತಿವೆ ಎಂದು ವಿಷಾದಿಸಿದರು.

ರೈತ ಮುಖಂಡ ಕೆ.ಟಿ ಗಂಗಾಧರ್ ಮಾತನಾಡಿ, ‘ಎನ್.ಡಿ.ಸುಂದರೇಶ್ ಅವರು ಮಾಡುತ್ತಿದ್ದ ರೈತ ಚಳವಳಿಗಳಿಂದ ರೈತರಿಗೆ ಆತ್ಮಸ್ಥೈರ್ಯ ಬಂದಿತ್ತು. ಚಳವಳಿಗಳಿಂದ ರಾಜಕೀಯ ಬದಲಾವಣೆ ತಂದುಕೊಟ್ಟಿತ್ತು’ ಎಂದು ಸ್ಮರಿಸಿದರು. ಶೋಭಾ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ ಶಿವಸುಂದರ್, ಆನಂದಸಾಗರ್, ಎನ್.ಎಸ್.ಸುಧಾಂಶು ಇದ್ದರು.

* * 

‘ಯುವ ಪೀಳಿಗೆ ಪಾಲ್ಗೊಳ್ಳಲಿ’

30 ವರ್ಷಗಳ ಹಿಂದೆ ರೈತಸಂಘ ನಾಡಿನ ರೈತರಲ್ಲಿ ಭರವಸೆಯನ್ನು ಮೂಡಿಸಿತ್ತು. ಆದರೆ, ಇಂದು ‘ಭರವಸೆ ಮೂಡಿಸುವ ಸಮಾವೇಶ’ ಎಂದು ಆಚರಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ರೈತಸಂಘ ರೈತರಿಗೆ ಬೆನ್ನೆಲುಬಾಗಿತ್ತು. ರೈತ ಚಳವಳಿಗಳಲ್ಲಿ ಯುವ ಪೀಳಿಗೆ ಪಾಲ್ಗೊಳ್ಳಬೇಕು. ಆಗ ಮಾತ್ರ ಚಳವಳಿಗಳು ಉಳಿಯಲು ಸಾಧ್ಯ ಎಂದು ದೇವನೂರ ಮಹಾದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.