ADVERTISEMENT

ಜಾತಿ ಸಮಾವೇಶಗಳಿಂದ ಭಯದ ವಾತಾವರಣ - ನಿಡುಮಾಮಿಡಿ ಶ್ರೀ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 10:05 IST
Last Updated 10 ಜೂನ್ 2012, 10:05 IST

ಶಿವಮೊಗ್ಗ: ಬಲಿಷ್ಠ ಜಾತಿ, ಧರ್ಮಗಳ ಸಮಾವೇಶಗಳ ಅಟ್ಟಹಾಸ ಅಸಹನೀಯವಾಗಿದ್ದು, ಕೆಳಜಾತಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿವೆ; ಭಯೋತ್ಪಾದನೆ ಹುಟ್ಟುಹಾಕುತ್ತಿವೆ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

 ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ಪರಿಶಿಷ್ಟ ಜಾತಿ-ವರ್ಗಗಳ ನೌಕರರ ಒಕ್ಕೂಟ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 74ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಸಮಾವೇಶಗಳು ಹಿಂದಿನಿಂದಲೂ ನಡೆಯುತ್ತಿದ್ದವು.ಅವು ಸುಪ್ತವಾಗಿದ್ದು, ನಿರುಪಕಾರಿಯಾಗಿರುತ್ತಿದ್ದವು. ಆದರೆ, ಒಂದು ದಶಕದ ಈಚೆಗಿನ ಜಾತಿ ಮತ್ತು ಧರ್ಮಗಳ ಸಮಾವೇಶಗಳ ಉದ್ದೇಶಗಳು, ಅಲ್ಲಿ ಕೈಗೊಳ್ಳುವ ನಿರ್ಣಯಗಳು ಪ್ರಜ್ಞಾವಂತರನ್ನೇ ದಿಗಿಲುಗೊಳಿಸುತ್ತವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಲಿಂಗಾಯತರು, ಬ್ರಾಹ್ಮಣರು, ಕುರುಬರು, ವಿಪ್ರ, ಒಕ್ಕಲಿಗ ಸಮುದಾಯಗಳ ಜಾತಿ ಸಮಾವೇಶಗಳು ಈಗ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಜಾತಿಗೆ ಸ್ಫೋಟಕ ಗುಣ ತುಂಬುವ ಕೆಲಸ ರಾಜಕಾರಣಿಗಳು ಮತ್ತು ಮಠಾಧೀಶರಿಂದ ಈ ಸಮಾವೇಶಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ನಾಡಿನ ಎಲ್ಲಡೆ ನಡೆಯುತ್ತಿರುವ ಈ ಜಾತಿ ಸಮಾವೇಶಗಳು ವೋಟ್ ಬ್ಯಾಂಕ್ ಭಾಗವಾಗಿ, ಶಕ್ತಿ ಪ್ರದರ್ಶನದ ಅಂಗವಾಗಿ ಕಂಡುಬರುತ್ತಿವೆ ಎಂದು ಟೀಕಿಸಿದರು.

ಈ ಸಮಾವೇಶಗಳು ಪ್ರಜಾಪ್ರಭುತ್ವದ ಅಣಕ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ವಿಕಾರಗೊಳಿಸಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿವೆ. ನಮ್ಮ ಜಾತಿಯವರಿಗೇ ಮತ ಹಾಕಬೇಕು ಎಂದು ನಿರ್ಣಯಿಸುವ ಸಮಾವೇಶಗಳು, ಸಜ್ಜನರಿಗೆ-ಯೋಗ್ಯರಿಗೆ ಮತ ಹಾಕಿ ಎಂದು ಏಕೆ ಒತ್ತಾಯಿಸುವುದಿಲ್ಲ ಎಂದು ಸ್ವಾಮೀಜಿ ಪ್ರಶ್ನಿಸಿದರು.

ಜಾತಿ ಸಮಾವೇಶಕ್ಕಿಂತ ಅಲೆಮಾರಿ ಸಮುದಾಯಗಳ ಒಕ್ಕೂಟ, ಅವಕಾಶ ವಂಚಿತ ಕೂಟಗಳ ರಚನೆಯಾಗಬೇಕು. ಇವರನ್ನು ರಾಜಕೀಯ ಶಕ್ತಿಯನ್ನಾಗಿಸಬೇಕು ಎಂದು ಆಹ್ವಾನ ನೀಡಿದ ಅವರು, ಇಂತಹ ಸಮುದಾಯಗಳಿಗೆ ನಾಯಕತ್ವ ನೀಡುವ ಕೆಲಸ ಆಗಬೇಕು. ಇದೇ ನಮ್ಮ ನಿರೀಕ್ಷೆ ಎಂದರು.

ಜಾತ್ಯಾಂಧತೆ, ಮತಾಂಧತೆ ಮನುಷ್ಯನನ್ನು ಕುಜ್ಜನನ್ನಾಗಿಸುತ್ತದೆ. ಈಗ ಸ್ವಾಭಿಮಾನ, ದುರಭಿಮಾನಗಳಲ್ಲಿ ಅಂತರವೇ ಕಾಣುತ್ತಿಲ್ಲ. ಕೆಲವರು ಸ್ವಾಭಿಮಾನವನ್ನೇ ಪೇಟೆಂಟ್ ಮಾಡಿಕೊಂಡವರಂತೆ ವರ್ತಿಸುತ್ತಿದ್ದಾರೆ. ಸ್ವಾರ್ಥಕ್ಕಾಗಿ ಸ್ವಾಭಿಮಾನದ ಹೆಸರನ್ನು ಬಳಸಲಾಗುತ್ತದೆ. ಸ್ವಾಭಿಮಾನದ ಪದವೂ ಅಪಚಾರಕ್ಕೆ ಒಳಗಾಗುತ್ತಿದೆ. ತಾತ್ವಿಕವಾದ ಸ್ವಾಭಿಮಾನ, ಜನರ ಹಿತದ ಸ್ವಾಭಿಮಾನ ಎಲ್ಲೂ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಅಂಬೇಡ್ಕರ್, ಬಸವೇಶ್ವರ ಅವರ ಕೆಲ ಅನುಯಾಯಿಗಳು ಅವರ ತತ್ವಗಳನ್ನು ಪಾಲನೆ ಮಾಡುತ್ತಿಲ್ಲ. ಅಂಬೇಡ್ಕರ್ ಹೆಸರು ಕೇವಲ ಮೀಸಲಾತಿ ಸೌಲಭ್ಯಕ್ಕಾಗಿ ಬಳಕೆಯಾಗುತ್ತಿದೆ. ಬಸವಣ್ಣನ ಅನುಯಾಯಿಗಳು ಜಾತಿವಾದಿಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಆರೋಪಿಸಿದರು.

ಅವಕಾಶವಾದಿತನದಿಂದ ಭ್ರಷ್ಟಾಚಾರ: ಇಂದಿನ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆ ಇಷ್ಟೊಂದು ಭ್ರಷ್ಟವಾಗಲು ಹೋರಾಟಗಾರರ, ಸ್ವಾಮೀಜಿಗಳ ಸ್ವಾರ್ಥ ಹಾಗೂ ಅವಕಾಶವಾದಿತನವೇ ಕಾರಣ. ಅಂಬೇಡ್ಕರ್ ನಂತರ ಹೋರಾಟಗಾರರು ಹೊಂದಾಣಿಕೆ ಮಾಡಿಕೊಂಡರು; ತದನಂತರ ಬಂದವರು ಅವಕಾಶವಾದಿತನ ಮಾಡಿದರು ಎಂದು ಆರೋಪಿಸಿದರು.

ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ ಮಾತನಾಡಿ, ವಿದ್ಯಾವಂತ ದಲಿತ ಗುಲಾಮಾರು ಸೃಷ್ಟಿಯಾಗುತ್ತಿದ್ದು, ಈ ಬಗ್ಗೆ ಸಮಾಜ ಗಮನ ಹರಿಸಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ ಉಪಸ್ಥಿತರಿದ್ದರು.

ಡಿಎಸ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪರಿಶಿಷ್ಟ ಜಾತಿ-ವರ್ಗಗಳ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಡಾ.ಸಣ್ಣರಾಮ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಡಾ.ಅಂಜನಪ್ಪ ಸ್ವಾಗತಿಸಿದರು. ಶ್ರುತಿ ಗುರುಮೂರ್ತಿ ಪ್ರಾರ್ಥಿಸಿದರು. ವಿಮರ್ಶಕ ಡಾ.ಕುಂಸಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

`ನಿತ್ಯಾನಂದ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ~
ಶಿವಮೊಗ್ಗ: ನಿತ್ಯಾನಂದ ಸ್ವಾಮೀಜಿ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ. ಈತನ ಆಶ್ರಮದಲ್ಲಿ ಅಧ್ಯಾತ್ಮ, ಯೋಗ, ಧರ್ಮ ಯಾವುದೂ ಇಲ್ಲ. ಹಣ ಹಾಗೂ ಅಧಿಕಾರದ ಮೂಲಕ ಸಂಚಲನ ಮೂಡಿಸಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ ಶನಿವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯಾನಂದನಂತಹ ಕಪಟ ಸ್ವಾಮೀಜಿಗಳು ಸಮಾಜದಲ್ಲಿ ಬಹಳಷ್ಟು ಜನ ಇದ್ದಾರೆ. ಅಂತಹವರೆಲ್ಲರನ್ನೂ ಜನ ಧಿಕ್ಕರಿಸಬೇಕು ಎಂದರು.
ಬಹುಜನರ ಭಾವನೆಗಳಿಗೆ ಬೆಲೆ ಕೊಟ್ಟು ಸರ್ಕಾರ ನಿತ್ಯಾನಂದನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಜಾತಿ, ಹಣ, ರಾಜಕೀಯ ಮತ್ತಿತರ ಕಾರಣಗಳಿಗೆ ಒಳಗಾಗಿ ಕಪಟ ಸ್ವಾಮೀಜಿಗಳನ್ನು ಸರ್ಕಾರವಾಗಲಿ, ಜನರಾಗಲಿ ಪ್ರೋತ್ಸಾಹಿಸಬಾರದು ಎಂದರು.

ಅನೇಕ ಸ್ವಾಮೀಜಿಗಳು ಪಾರ್ಟ್ ಟೈಂ ರಾಜಕಾರಣಿಗಳಾಗಿದ್ದಾರೆ. ವಿವಿಧ ರಾಜಕೀಯ ಪಕ್ಷ, ವ್ಯಕ್ತಿಗಳ ಜತೆ ಗುರುತಿಸಿಕೊಂಡು, ಅಧಿಕಾರಶಕ್ತಿಯನ್ನು ನಿಯಂತ್ರಿಸುತ್ತಿದ್ದಾರೆ. ಇಂತಹವರಿಂದ ಸಮಾಜದಲ್ಲಿ ಸ್ವಾಮೀಜಿಗಳ ಬಗ್ಗೆ ಕೆಟ್ಟ ಹೆಸರು ಬರುವಂತಾಗಿದೆ. ನಿಜವಾದ ಸಾಧಕರಿಗೆ, ಸಾಮಾಜಿಕ ಕಳಕಳಿವುಳ್ಳವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT