ADVERTISEMENT

ಜಿಲ್ಲಾಧಿಕಾರಿ ವಿರುದ್ಧ ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 8:30 IST
Last Updated 12 ಜೂನ್ 2013, 8:30 IST

ಶಿವಮೊಗ್ಗ: ಜಿಲ್ಲಾಧಿಕಾರಿ ನ್ಯಾಯಾಲ ಯದಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರೊಬ್ಬರಿಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನಿಂದಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು, ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜೂ.10ರಂದು ವಕೀಲ ಎಚ್. ಬಿ.ದೇವೇಂದ್ರಪ್ಪ ಅವರು ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿಗಳು, ಸಾಕಷ್ಟು ದೂರ ನಿಂತು ವಾದ ಮಂಡನೆ ಮಾಡಿ. ತಾವು ಜಿಲ್ಲಾಧಿಕಾರಿ ಆಗಿದ್ದು, ಇಷ್ಟ ಬಂದಂತೆ ಆದೇಶ ನೀಡುತ್ತೇನೆ ಎಂದೆಲ್ಲ ದೇವೇಂದ್ರಪ್ಪ ಕುರಿತು ಜಿಲ್ಲಾಧಿಕಾರಿ ಮಾತನಾಡಿದ್ದಾರೆ. ಜತೆಗೆ ನ್ಯಾಯಾಲಯದ ಆವರಣದಿಂದ ಹೊರ ಹೋಗುವಂತೆ ವಕೀಲರಿಗೆ ದಬಾಯಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರತಿಭಟನಾನಿರತ ವಕೀಲರು ದೂರಿದರು.

ಇದಕ್ಕೆ ಇತರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗಲೂ ಗಮನಹರಿಸದೆ ಏಕಾಏಕಿ ನ್ಯಾಯಾಲಯದ ಕಲಾಪ ನಡೆಸುವುದಿಲ್ಲ ಎಂದು ಹೇಳಿ ಇದ್ದಕ್ಕಿದ್ದಂತೆ ಉಳಿದ ಪ್ರಕರಣಗಳ ವಿಚಾರಣೆಯನ್ನೂ ನಡೆಸದೆ ಹೊರ ಹೋಗಿ, ಪುನಃ ಅರ್ಧ ಗಂಟೆ ನಂತರ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದಾರೆ. ಮತ್ತದೇ ರೀತಿಯಲ್ಲಿ ವಕೀಲರಿಗೆ ಅವಮಾ ನಕರವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದರು.

ತೆರೆದ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರೊಬ್ಬರ ಜತೆ ಜಿಲ್ಲಾಧಿಕಾರಿ ನಡೆದುಕೊಂಡ ರೀತಿ ಸರಿಯಲ್ಲ. ಇದು ವಕೀಲರ ಸಮೂಹಕ್ಕೆ ಮಾಡಿದ ಅಪಮಾನ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಯನ್ನು ವರ್ಗಾ ವಣೆ ಮಾಡಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಕೀಲರಾದ ಎಚ್.ಬಿ.ದೇವೇಂದ್ರಪ್ಪ, ವಿನೋದ್, ನಾಗೇಶನ್, ಕೆ.ಪಿ.ಶ್ರೀಪಾಲ್, ಈಸೂರು ಲೋಕೇಶ್, ಮಂಜುಳಾದೇವಿ, ರಂಗನಾಥ್, ನಾರಾಯಣ್, ಅಶೋಕ್ ಭಾಗವಹಿಸಿದ್ದರು.

ನಿಂದನಾತ್ಮಕ ಹೇಳಿಕೆ ನೀಡಿಲ್ಲ: ಜಿಲ್ಲಾಧಿಕಾರಿ 
`ನಾನು ವಕೀಲರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದೇನೆ ಎಂಬ ಆರೋಪ ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ;' ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸ್ಪಷ್ಟಪಡಿಸಿದ್ದಾರೆ.

`ನ್ಯಾಯಾಲಯದ ಆವರಣದಿಂದ ಹೊರಗೆ ಹೋಗಿ, ತಮಗೆ ಬೇರೆ ಉದ್ಯೋಗವಿದೆ ಎಂದು ಅವಹೇಳನಕಾರಿ ಮಾತುಗಳನ್ನು ಹೇಳಿಲ್ಲ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ಆದೇಶ ಹೊರಡಿಸಿದಾಗ ತಮ್ಮ ವಿರುದ್ಧ ಆದೇಶ ಬಂದಿದ್ದಕ್ಕೆ ಆ ವಕೀಲರು ಜೋರಾಗಿ ಮಾತನಾಡಿ, ಇದು ಸುಪ್ರೀಂ ಕೋರ್ಟ್ ಅಲ್ಲ. ನೀವು ಒಬ್ಬರ ಪರವಾಗಿ ತೀರ್ಪು ನೀಡಿದ್ದೀರ' ಎಂದು ಆರೋಪಿಸಿ, ಜಿಲ್ಲಾಧಿಕಾರಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದರು. ಈ ರೀತಿ ಮಾತನಾಡದಂತೆ ನಾನು ವಕೀಲರಿಗೆ ಸಲಹೆ ನೀಡಿದ್ದಾಗಿ ಘಟನೆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

`ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಹ ತನ್ನದೇ ಆದ ನೀತಿ-ನಿಯಮಗಳಿವೆ. ತಾವು ನೀಡುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ನ್ಯಾಯಾಂಗ ನಿಂದನೆ ವಿಷಯ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೂ ಅನ್ವಯವಾಗುತ್ತದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ರಾಜ್ಯ ವಕೀಲರ ಸಂಘಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.