ADVERTISEMENT

ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:05 IST
Last Updated 14 ಜೂನ್ 2011, 10:05 IST
ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ
ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ   

ಶಿವಮೊಗ್ಗ: ಬಡವರು ಮತ್ತು ಹಿಂದುಳಿದ ಪಂಗಡವರೇ ಹೆಚ್ಚಿರುವ, ತೀರಾ ಹಿಂದುಳಿದ ಪ್ರದೇಶವಾದ ಸಾಗರ ತಾಲ್ಲೂಕು ಅರಳಗೋಡು ಗ್ರಾಮ ಪಂಚಾಯ್ತಿಯ ಇಂದ್ರೋಣಿಮನೆ (ಬ್ರಾಹ್ಮಣ ಇಳಕಳಲೆ)ಯಲ್ಲಿ 1ರಿಂದ 7ನೇ ತರಗತಿಯ ವಸತಿಶಾಲೆಯ ಆರಂಭಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅನುಪಾಲನಾ ವರದಿಯ ಚರ್ಚೆಯಲ್ಲಿ  ಅವರು ಮಾತನಾಡಿದರು.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ಮಾಡಿ, ತದನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ಡಿಡಿಪಿಐಗೆ ಸೂಚಿಸಿದರು.

ಇಂದ್ರೋಣಿಮನೆ  ಗ್ರಾಮದಲ್ಲಿ ಈಗಾಗಲೇ 1ರಿಂದ 5ನೇ ತರಗತಿವರೆಗೆ ಶಾಲೆ ನಡೆಯುತ್ತಿದ್ದು, 1ನೇ ತರಗತಿಯಲ್ಲಿ 5 ಮಕ್ಕಳು, 2ನೇ ತರಗತಿಯಲ್ಲಿ 8, 3ನೇ ತರಗತಿಯಲ್ಲಿ ಮಕ್ಕಳಿಲ್ಲ, 4ನೇ ತರಗತಿಯಲ್ಲಿ 5 ಮಕ್ಕಳು ಹಾಗೂ 5ನೇ ತರಗತಿಯಲ್ಲಿ 1 ಮಗುವಿದ್ದು, ಒಟ್ಟು 19 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಕ್ತ 6ನೇ ತರಗತಿಗೆ ದಾಖಲಾಗುವ ಒಂದು ಮಗು ಇರುವುದರಿಂದ 6 ಮತ್ತು 7ನೇ ತರಗತಿ ಆರಂಭಿಸಲು ನಿಯಮದಲ್ಲಿ ಅವಕಾಶ ಇಲ್ಲ ಎಂದು ಡಿಡಿಪಿಐ ಪರಮಶಿವಯ್ಯ ಸಭೆಗೆ ತಿಳಿಸಿದರು.

ಇಂದ್ರೋಣಿಮನೆ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಅಲ್ಲಿ ಮಕ್ಕಳು 6ನೇ ತರಗತಿಗೆ ಪ್ರತಿದಿನ ್ಙ 100 ಆಟೋ ಚಾರ್ಜ್ ನೀಡಿ ಹೋಗಬೇಕಾಗಿದೆ. ಆದ್ದರಿಂದ ಅಲ್ಲಿ ಜಿ.ಪಂ. ವತಿಯಿಂದ ಒಂದು ವಸತಿಶಾಲೆ ಸ್ಥಾಪಿಸುವ ಅಗತ್ಯವಿದೆ ಎಂದು ಜಿ.ಪಂ. ಉಪಾಧ್ಯಕ್ಷ ಹುಣವಳ್ಳಿ ಗಂಗಾಧರ್ ತಾವು ಆ ಸ್ಥಳಕ್ಕೆ ಭೇಟಿ ನೀಡಿದ ವಿವರ ನೀಡಿದರು.

ತದನಂತರ ಜಿ.ಪಂ. ಅಧ್ಯಕ್ಷರು, ತಕ್ಷಣಕ್ಕೆ ಸ್ಥಳಕ್ಕೆ ಭೇಟಿ ನೀಡಿ ಎಂದು ಡಿಡಿಪಿಐ  ಅವರಿಗೆ ಸೂಚಿಸಿದರು. ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಂಡ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ ಬಂದು ಕರ್ತವ್ಯ ವಹಿಸಿಕೊಳ್ಳುವ ತನಕ ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಆ ಸ್ಥಳದಿಂದ ಬದಲಾವಣೆ ಮಾಡಬೇಡಿ ಎಂದರು.

ಜಿಲ್ಲೆಯಲ್ಲಿ 247 ಶಿಕ್ಷಕರ ಕೊರತೆ ಇದೆ. ಸರ್ಕಾರದ ನಿಯಮದ ಪ್ರಕಾರ 10 ಮಕ್ಕಳಿಗೆ ಒಬ್ಬ ಶಿಕ್ಷಕರು ಇರಲೇ ಬೇಕು. ಅದರಲ್ಲೂ ಮಲೆನಾಡು ಪ್ರದೇಶಗಳಲ್ಲಿ ಒಂದು ತರಗತಿಗೆ ಎರಡು ಜನ ಶಿಕ್ಷಕರು ಇರಲೇಬೇಕೆಂಬ ನಿಯಮವಿದೆ. ಹಾಗಾಗಿ, ಇರುವ ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಡಿಡಿಪಿಐ ಸಭೆಗೆ ತಿಳಿಸಿದರು.

ಸಾಗರದ ನಾಗವಳ್ಳಿ ಪ್ರೌಢಶಾಲೆಗೆ ಈ ಬಾರಿ ಶೇ. 100ರಷ್ಟು ಫಲಿತಾಂಶ ಬಂದಿದೆ. ಅಲ್ಲಿ ಶಾಲೆ ನಿರ್ಮಿಸಲು ಉದ್ದೇಶಿತ ಜಾಗ ಉಸುಕು ಇರುವ ಕಾರಣ ತಳಪಾಯದ ಹೆಚ್ಚುವರಿ ವೆಚ್ಚಕ್ಕಾಗಿ ್ಙ 5 ಲಕ್ಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದರೂ ಸಂಬಂಧಪಟ್ಟವರು ಕಟ್ಟಡ ನಿರ್ಮಿಸಲು ಮುಂದಾಗಿಲ್ಲ ಎಂದು ಡಿಡಿಪಿಐ ಆರೋಪಿಸಿದರು. ತಕ್ಷಣ ಕಟ್ಟಡ ಕಾಮಗಾರಿ ಆರಂಭಿಸುವಂತೆ ಜಿ.ಪ.ಉಪಾಧ್ಯಕ್ಷ ಹುಣವಳ್ಳಿ ಗಂಗಾಧರ್, ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶ್ವರಪ್ಪ, ಜಿ.ಪಂ. ಸಿಇಒ ಡಾ.ಸಂಜಯ ಬಿಜ್ಜೂರು ಇದ್ದರು.

ಕಾಡಿದ ಮೊಬೈಲ್

ಶಿವಮೊಗ್ಗ: `ಮೊಬೈಲ್ ಸ್ವಿಚ್‌ಆಫ್ ಮಾಡಿ, ಇಲ್ಲವಾದರೆ ಸಭೆ ನಡೆಸುವುದು ಕಷ್ಟವಾಗುತ್ತೆ~- ಹೀಗೆ ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಜಿ.ಪಂ. ಅಧಿಕಾರಿ ಗಳಿಗೆ ಸಾಕಷ್ಟು ಬಾರಿ ಮಾಡಿದ ಮನವಿ ಕೊನೆಗೂ ಫಲಕೊಡಲಿಲ್ಲ.

ಸಭೆ ಉದ್ದಕ್ಕೂ ಮೊಬೈಲ್ ಕಿರಿಕಿರಿ ಕಾಡಿತು. ಯಾರ ಮೊಬೈಲ್? ಎಲ್ಲಿಂದ ಬರುತ್ತಿದೆ? ಎಂಬುದು ಕಂಡು ಹಿಡಿಯಲು ಯಾರಿಗೂ ಸಾಧ್ಯವಾಗಲೇ ಇಲ್ಲ. ಶಬ್ದ ಬಂದಾಗಲೆಲ್ಲ ಒಂದು ಕ್ಷಣ ಮೌನವಾಗುತ್ತಿದ್ದ ಸಭೆ ನಂತರ ಆರಂಭವಾಗುತ್ತಿತ್ತು. ಒಟ್ಟಾರೆ ಇಡೀ ಸಭೆಯನ್ನು ಮೊಬೈಲ್ ಕಾಡಿತು.

ಮೊಬೈಲ್ ಕಿರಿಕಿರಿ ಕಾಡಿದಾಗಲೆಲ್ಲ ವೇದಿಕೆ ಮೇಲಿದ್ದವರು ಅಧಿಕಾರಿಗಳತ್ತ ಸಂಶಯದತ್ತ ನೋಡಿದರೆ, ಅಧಿಕಾರಿಗಳು ವೇದಿಕೆ ಮೇಲಿದ್ದವರತ್ತ ಗುಮಾನಿಯಿಂದ ನೋಡುತ್ತಿರುವುದು ಕಂಡುಬಂತು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.