ADVERTISEMENT

ಜೋಗದ ಸಿರಿ ಸವಿಯಲು ಜನಸಾಗರ

ಲಿಂಗನಮಕ್ಕಿ ಜಲಾಶಯದಿಂದ ನೀರು, ಮೈದುಂಬಿದ ಜಲಪಾತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:19 IST
Last Updated 5 ಆಗಸ್ಟ್ 2013, 10:19 IST

ಕಾರ್ಗಲ್: ಸಮೀಪದ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚು ನೀರು ಹರಿಯುತ್ತಿದ್ದು, ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.
ನಾಡಿನ ಮೂಲೆ ಮೂಲೆಗಳಿಂದ ಭಾನುವಾರ ಪ್ರವಾಸಿಗರ ಜಲಪಾತದ ದರ್ಶನಕ್ಕೆ ಹರಿದು ಬಂದಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿ ವಾಹನಗಳು 2ಕಿ.ಮೀ. ದೂರದವರೆಗೂ ಸರದಿಯಾಗಿ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕ್ ಮಾಡಿದ್ದವು. ಪ್ರವಾಸಿಗರು ವಾಹನಗಳನ್ನು ಲೆಕ್ಕಿಸದೇ ತಾವು ಬಂದ ವಾಹನಗಳಿಂದ ಇಳಿದು 2ರಿಂದ 3ಕಿ.ಮೀ. ನಡೆದುಕೊಂಡು ಬಂದು ಜಲಪಾತದ ಸೌಂದರ್ಯ ಸವಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೈಸೂರು ಬಂಗಲೆಯ ಪ್ರದೇಶದಲ್ಲಿ ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸಿದ್ದರು.

ಜೋಗದ ಗುಂಡಿಗೆ ಇಳಿಯುವ ಮಾರ್ಗದಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ಪೊಲೀಸ್ ಇಲಾಖೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಮೇಲ್ಭಾಗದಿಂದಲೇ ಪ್ರವಾಸಿಗರು ಕಿಕ್ಕಿರಿದು ಸೇರಿದ್ದರು.  ಜಲಪಾತದ ಸೊಬಗನ್ನು ಸವಿಯಲು ಭಾನುವಾರ  ಕೆಪಿಸಿ ಕೇಂದ್ರ ಕಚೇರಿಯ ತಾಂತ್ರಿಕ ನಿರ್ದೇಶಕ ಭಾಸ್ಕರ್, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಸತ್ಯನಾರಾಯಣ ಅವರು ಸೇರಿದಂತೆ ಹಲವು ನ್ಯಾಯಾಧೀಶರು, ಗಣ್ಯರು, 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಈ ಸಂದರ್ಭ ಮಾತನಾಡಿದ ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣ ಅವರು, ಪ್ರವಾಸಿಗರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಬೇಕು. ಇಲ್ಲಿನ ಪರಿಸರ, ನಿಸರ್ಗ ಸಂಪತ್ತು ನಮ್ಮ ಮುಂದಿನ ಪೀಳಿಗೆಗೆ ಆಸ್ತಿಯಾಗಿದ್ದು ಇವನ್ನು ಉಳಿಸಿ, ಬೆಳೆಸುವ ಕೆಲಸ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಜೋಗದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬರುತ್ತಿದ್ದು, ಕಸ ಕಡ್ಡಿಗಳ ಜತೆ ಪ್ಲಾಸ್ಟಿಕ್ ಬಳಕೆ ಇಲ್ಲಿನ ಪರಿಸರವನ್ನು ಹಾಳು ಮಾಡುತ್ತಿದೆ. ಮೂಲಸೌಕರ್ಯ ಗಳಾದ ಶೌಚಾಲಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜೋಗದಲ್ಲಿ ಪ್ರವಾಸಿಗರಿಗೆ ಒದಗಿಸಬೇಕು. ಇಲ್ಲಿನ ಸಂಗೀತ ಕಾರಂಜಿ ಇತರೆಡೆಗಿಂತ ವಿಭಿನ್ನವಾಗಿದ್ದು, ಮಾದರಿ ತಂತ್ರಜ್ಞಾನಗಳನ್ನು ಅಳವಡಿಸಿ ಪ್ರವಾಸಿಗರಿಗೆ ಉತ್ತಮ ಮನರಂಜನೆ ನೀಡುತ್ತಿದೆ ಎಂದು ನ್ಯಾಯಧೀಶರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.