ADVERTISEMENT

ಡಿ.ಇಡಿ ಕಾಲೇಜುಗಳ ಯುವಜನೋತ್ಸವ ಕಾರ್ಯಕ್ರಮ.ಸೃಜನಾತ್ಮಕ ಮನೋಭಾವದಿಂದ ಪ್ರಗತಿ ಸಾಧ್ಯ.

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:10 IST
Last Updated 19 ಫೆಬ್ರುವರಿ 2011, 7:10 IST

ಶಿಕಾರಿಪುರ: ಶಿಕ್ಷರಲ್ಲಿ ಸೃಜನಾತ್ಮಕ ಮನೋಭಾವ ಇದ್ದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ  ಕುಲಪತಿ ಎಸ್.ಎ. ಬಾರಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಕುಮದ್ವತಿ ಶಿಕ್ಷಕರ ತರಬೇತಿ ಸಂಸ್ಥೆ ವತಿಯಿಂದ ನಡೆದ ಬೆಂಗಳೂರು ವಿಭಾಗಮಟ್ಟದ ಡಿ.ಇಡಿ ಕಾಲೇಜುಗಳ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.

ಶಿಕ್ಷಕರ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ತರಬೇತಿಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಇದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪದವಿಪೂರ್ವ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣಕ್ಕೆ ತೆರಳುತ್ತಿದ್ದು, ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿ ಎಂದರು. ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿರುವ ಶ್ರೇಷ್ಠ ವೃತ್ತಿ ಶಿಕ್ಷಕರದ್ದು ಇದರತ್ತ ಹೆಚ್ಚಿನ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಮಾತನಾಡಿ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಕ್ರೀಡೆಯಲ್ಲಿ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೂ ಮೊದಲು ವಿಭಾಗಮಟ್ಟದ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದ ಸಾಂಸ್ಕೃತಿಕ ಪಥ ಸಂಚಲನ ಜನಾಕರ್ಷಣೆಯಿಂದ ಕೂಡಿತ್ತು. ಡಿಎಸ್‌ಇಆರ್‌ಟಿ ಎಂ.ಎಸ್. ಪಾಟೀಲ್, ಡಯಟ್ ಪ್ರಾಚಾರ್ಯೆ ಜಿ.ಪಿ. ಚಂದ್ರಮ್ಮ, ರಾಜ್ಯ ಸಂಪರ್ಕಾಧಿಕಾರಿ ಡಾ.ಧನಂಜಯ್, ಸಂಯೋಜನಾಧಿಕಾರಿ ಎಂ.ಬಿ. ಶಿವಕುಮಾರ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ತೇಜಸ್ವಿನಿ ರಾಘವೇಂದ್ರ, ವಿಜಯೇಂದ್ರ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.