ADVERTISEMENT

ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್ನಿಂದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:00 IST
Last Updated 19 ಫೆಬ್ರುವರಿ 2011, 8:00 IST

ಶಿವಮೊಗ್ಗ: ಸ್ವ-ಸಹಾಯ ಗುಂಪುಗಳ ರಚನೆ, ಸಾಲ ಜೋಡಣೆ ಹಾಗೂ ಗುಂಪುಗಳ ಕಾರ್ಯ ನಿರ್ವಹಣೆಯಲ್ಲಿ ಮಾಡಿದ ಉತ್ತಮ ಸಾಧನೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್‌ನಿಂದ 2009-10ನೇ ಸಾಲಿನ ಪ್ರಶಸ್ತಿ ಲಭಿಸಿದೆ.2009-10ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಒಟ್ಟು 2,300 ಗುಂಪುಗಳಿಗೆ ್ಙ 16 ಕೋಟಿ ಸಾಲ ವಿತರಣೆ ಮಾಡಿತ್ತು. 650 ಹೊಸ ಗುಂಪುಗಳನ್ನು ರಚಿಸಿತ್ತು. ಈ ಸಾಧನೆ ಪರಿಗಣಿಸಿ ನಬಾರ್ಡ್, ಪ್ರಶಸ್ತಿ ನೀಡಿ ಗೌರವಿಸಿದೆ.

ಅಲ್ಲದೇ, ಬ್ಯಾಂಕ್‌ನ ಸ್ವ-ಸಹಾಯ ಗುಂಪುಗಳ ವಿಭಾಗದ ವ್ಯವಸ್ಥಾಪಕ ಕೆ.ಆರ್. ಗಣಪತಿ ಅವರಿಗೆ ಸಂಘಟನೆ, ತರಬೇತಿ ನೀಡುವುದು ಹಾಗೂ ಸ್ವ-ಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಗೆ ಸಹಕಾರ ನೀಡಿದ್ದಕ್ಕಾಗಿ ಉತ್ತಮ ನೋಡೆಲ್ ಅಧಿಕಾರಿ ಪ್ರಶಸ್ತಿ ನೀಡಿದೆ. ಈಚೆಗೆ ನಬಾರ್ಡ್‌ನ ಮುಖ್ಯ ವ್ಯವಸ್ಥಾಪಕ ವೆಂಕಟೇಶ್ ತಗತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಪ್ರಶಸ್ತಿ ಪ್ರದಾನ ಮಾಡಿದರು. 

ದಾಖಲೆ ಪ್ರಮಾಣದ ಲಾಭ ಗಳಿಕೆ
ಅಪೆಕ್ಸ್ ಬ್ಯಾಂಕ್ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕ ಅವಧಿಗೆ 36 ಕೋಟಿ ದಾಖಲೆ ಪ್ರಮಾಣದ ಲಾಭ ಗಳಿಸಿದೆ.ಕಳೆದ ಬಾರಿ ಅಪೆಕ್ಸ್ ಬ್ಯಾಂಕ್ ಒಟ್ಟು  90 ಕೋಟಿಲಾಭ ಗಳಿಸಿತ್ತು. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಸಲ ದಾಖಲೆ ಪ್ರಮಾಣದಲ್ಲಿ ಬ್ಯಾಂಕ್ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ 8.72 ಲಕ್ಷ ರೈತರಿಗೆ ಸರ್ಕಾರದ ಶೇ. 3ರಷ್ಟು ಬಡ್ಡಿ ದರದಲ್ಲಿ ್ಙ 2,600 ಕೋಟಿ ಬೆಳೆ ಸಾಲ ವಿತರಣೆ ಮಾಡಲಾಗಿತ್ತು. ಆದರೆ, ಈ ಸಲ 11.72ಲಕ್ಷ ರೈತರಿಗೆ ಒಟ್ಟು ್ಙ 3,400 ಕೋಟಿ ಸಾಲ ವಿತರಿಸಲಾಗಿದೆ. ಅಂದರೆ, ಕಳೆದ ವರ್ಷಕ್ಕಿಂತ 2.35ಲಕ್ಷ ರೈತ ಕುಟುಂಬಗಳಿಗೆ ್ಙ 800 ಕೋಟಿ  ಹೆಚ್ಚು ಸಾಲ ವಿತರಿಸಲಾಗಿದೆ. ಅದೇ ರೀತಿ, 1.73 ಲಕ್ಷ ಸ್ವ-ಸಹಾಯ ಗುಂಪುಗಳಿಗೆ 21 ಡಿಸಿಸಿ ಬ್ಯಾಂಕ್ ಹಾಗೂ 4,600 ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಶೇ. 4ರ ಬಡ್ಡಿ ದರದಲ್ಲಿ ್ಙ 1,480 ಕೋಟಿ  ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶೇ. 99ರಷ್ಟು ವಸೂಲಾತಿ: ಜತೆಗೆ ಮೊದಲ ಬಾರಿಗೆ ಪ್ರವಾಸೋದ್ಯಮ, ವಿದ್ಯಾಭ್ಯಾಸಕ್ಕೆ ಹಾಗೂ ಕಿರು ಉದ್ದಿಮೆದಾರರಿಗೆ ಶೇ. 10ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ. ಹಾಗೆಯೇ, ಈ ಬಾರಿ ಜನವರಿ ಅಂತ್ಯಕ್ಕೆ ಶೇ. 99ರಷ್ಟು ಸಾಲ ವಸೂಲಾತಿ ಆಗಿದೆ. ಕಳೆದ ವರ್ಷ ಶೇ. 88ರಷ್ಟು ಸಾಲ ವಸೂಲಾತಿ ಆಗಿತ್ತು ಎಂದು ವಿವರಿಸಿದರು. 2012ರ ಮಾರ್ಚ್ ಅಂತ್ಯಕ್ಕೆ 23 ಲಕ್ಷ ರೈತರಿಗೆ6,305 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಂಜುನಾಥಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.