ADVERTISEMENT

ತಾ.ಪಂ. ಅಧಿಕಾರ ಕಾಂಗ್ರೆಸ್-ಜೆಡಿಎಸ್ ಪಾಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:15 IST
Last Updated 9 ಫೆಬ್ರುವರಿ 2011, 10:15 IST

ಶಿವಮೊಗ್ಗ: ತಾಲ್ಲೂಕು ಪಂಚಾಯ್ತಿ ಆಡಳಿತ ಕೊನೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪಾಲಾಗಿದೆ. ಮಂಗಳವಾರ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕುಂಚೇನಹಳ್ಳಿಯ ಕೆ.ಬಿ. ಚಂದ್ರಶೇಖರಪ್ಪ, ಉಪಾಧ್ಯಕ್ಷರಾಗಿ ಅಬ್ಬಲಗೆರೆ ಕ್ಷೇತ್ರದ ಜೆಡಿಎಸ್‌ನ ಕಮಲಮ್ಮ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಒಟ್ಟು 18 ಸ್ಥಾನದಲ್ಲಿ ಬಿಜೆಪಿ 8, ಜೆಡಿಎಸ್ 6 ಹಾಗೂ ಕಾಂಗ್ರೆಸ್ 4 ಸ್ಥಾನ ಪಡೆದಿದ್ದವು. ಆದರೆ, ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದ್ದರೂ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದೆ.
ಕಾಂಗ್ರೆಸ್‌ಗಿಂತ ನಾವು ಹೆಚ್ಚಿನ ಸ್ಥಾನ ಪಡೆದಿದ್ದರೂ ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ನಮ್ಮ ಪಕ್ಷದಲ್ಲಿದ್ದವರಿಗೆ ಸಿಕ್ಕಿರುವುದರಿಂದ ಒಪ್ಪಿಕೊಳ್ಳಬೇಕಾಯಿತು.

ಮುಂದಿನ ಅವಧಿಯಲ್ಲಿ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.ಆಯ್ಕೆ ನಡೆದ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಗಾಜನೂರು ಗಣೇಶ್, ಜಿ.ಪಂ. ಸದಸ್ಯ ಕೃಷ್ಣೇಗೌಡ, ಮುಖಂಡರಾದ ಪಾಲಾಕ್ಷಿ, ಚಿನ್ನಪ್ಪ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

22ಕ್ಕೆ ಸಮೀಕ್ಷೆ
ಲೋಕೋಪಯೋಗಿ ಇಲಾಖೆ, ಫೆ. 22ರಂದು ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ರಸ್ತೆ ಸಂಚಾರ ಮಾದರಿ ಸಮೀಕ್ಷೆ ನಡೆಸಲು ಉದ್ದೇಶಿಸಿದೆ.
ಹೆದ್ದಾರಿ ಯೋಜನೆ ರೂಪಿಸಲು, ಹಾಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಮೇಲ್ಮೈ ರೂಪಿಸಲು, ರಸ್ತೆಗಳನ್ನು ವಿಸ್ತರಿಸಲು, ವಾಹನ ಸಂಚಾರ ಸುಗಮಗೊಳಿಸಲು, ಸಂಚಾರದಲ್ಲಿ ಸುರಕ್ಷತೆ ಉತ್ತಮಪಡಿಸಲು, ರಸ್ತೆ ಅಪಘಾತಗಳನ್ನು ನಿವಾರಿಸಲು ಹಾಗೂ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಮೀಕ್ಷೆ ನಡೆಸಲಿದೆ.

ಶಿವಮೊಗ್ಗ ಲೋಕೋಪಯೋಗಿ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳಲ್ಲಿ ನಿಗದಿಪಡಿಸಿದ ಕೇಂದ್ರಗಳಲ್ಲಿ ಗಣತಿ ಕಾರ್ಯ ಕೈಗೊಳ್ಳಲಿದೆ.ಈ ಸಮೀಕ್ಷೆ ಕಾರ್ಯದಲ್ಲಿ ಸಾರ್ವಜನಿಕರು, ಸಂಘ- ಸಂಸ್ಥೆಗಳು, ವಾಹನಗಳ ಮಾಲೀಕರು ಮತ್ತು ಚಾಲಕರು ಸಹಕರಿಸುವಂತೆ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.