ತೀರ್ಥಹಳ್ಳಿ: ತಾಲ್ಲೂಕಿನ ಬಗರ್‌ಹುಕುಂ ಭೂ ಸಾಗುವಳಿ ರೈತರು ಹಕ್ಕು ಪತ್ರ ಪಡೆಯಲು ಇನ್ನೆಷ್ಟು ದಿನ ಕಾಯಬೇಕೋ?ಸರ್ಕಾರ ಈಗ ರಚಿಸಿರುವ ಭೂ ಸಕ್ರಮೀಕರಣ ಸಮಿತಿಯ ಅಧಿಕಾರ ವ್ಯಾಪ್ತಿಯ ಬಗ್ಗೆ ಸೃಷ್ಟಿಯಾಗಿರುವ ಗೊಂದಲ ಭೂ ಹಿಡುವಳಿ ಪಡೆಯಬೇಕೆಂಬ ರೈತರ ಕನಸು ಭಗ್ನವಾಗಲು ಕಾರಣವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಬಗರ್‌ಹುಕುಂ ಭೂ ಸಾಗುವಳಿ ರೈತರ ಸಮಸ್ಯೆ ಬಗೆ ಹರಿಯಬಹುದು ಎನ್ನುವ ನಿರೀಕ್ಷೆ ಮೂಡಿತ್ತು. ಆದರೆ, ರೈತರ ನಿರೀಕ್ಷೆ ಹುಸಿಯಾಗಿದೆ. ತಾಲ್ಲೂಕಿನಲ್ಲಿ ಬಗರ್‌ಹುಕುಂ ಭೂ ಸಕ್ರಮೀಕರಣ ಸಮಿತಿಯನ್ನು ಮೂರು ವರ್ಷಗಳ ನಂತರ ರಚಿಸಿದ್ದರೂ ಕೂಡ ಅದರ ಅಧಿಕಾರವನ್ನು ಮೊಟಕುಗೊಳಿಸಿರುವುದು ರೈತರ ಪಾಲಿಗೆ ಶಾಪವಾಗಿದೆ ಎಂದು ರೈತರು ದೂರಿದ್ದಾರೆ.
ಬಗರ್‌ಹುಕುಂ ಸಾಗುವಳಿ ಮಂಜೂರಾತಿಗಾಗಿ ಫಾರಂ ನಂ. 50 ಹಾಗೂ 53ರಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ರೈತರು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರದ ನೂತನ ನಿಯಮಗಳು ಅರ್ಜಿದಾರರ ಹಕ್ಕು ಪತ್ರದ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ಸಮಿತಿಗೆ ಫಾರಂ ನಂ. 50ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಭೂ ಮಂಜೂರಾತಿ ಮಾಡುವ ಅಧಿಕಾರವಿದೆ ಎಂದು ಅಧಿಕಾರಿ ವಲಯ ಹೇಳುತ್ತಿದೆ.
ಇದು ಸ್ಪಷ್ಟವಾದರೆ ಫಾರಂ ನಂ. 53ರಲ್ಲಿ ಅರ್ಜಿಸಲ್ಲಿಸಿದ ರೈತರು ಮಂಜೂರಾತಿಯಿಂದ ಹೊರಗುಳಿಯುತ್ತಾರೆ. ಸರ್ಕಾರದ ಈಗಿನ ನಿಯಮಗಳ ಪ್ರಕಾರ ಮುಂದಿನ ಆರು ತಿಂಗಳ ನಂತರ ಯಾವ ಅರ್ಜಿಗಳನ್ನು ಮಂಜೂರಾತಿಗೆ ಪರಿಗಣಿಸುವಂತಿಲ್ಲ. ಸರ್ಕಾರದ ಈ ನಿಯಮ ಬಗರ್‌ಹುಕುಂ ಭೂ ಸಾಗುವಳಿ ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ಈಗ ರಚನೆಗೊಂಡಿರುವ ಸಮಿತಿ ಈವರೆಗೂ ಸಭೆ ನಡೆಸಿಲ್ಲ. ಸರ್ಕಾರದ ನಿಯಮದ ಪ್ರಕಾರ ಸಮಿತಿಗೆ ಇರುವ ಅಧಿಕಾರ ಏನು ಎಂಬುದರ ಬಗ್ಗೆ ಚರ್ಚೆ ನಡೆಸಿಲ್ಲ. ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆದರೂ, ಸರ್ಕಾರ ಸ್ಪಷ್ಟೀಕರಣ ನೀಡಿಲ್ಲ.ಸರ್ಕಾರದ ನಿಧಾನಗತಿಯ ನಿಲುವಿನಿಂದ ‘ಅತ್ತ ಹಾವು ಸಾಯಬಾರದು, ಇತ್ತ ಕೋಲೂ ಮರಿಯಬಾರದು’ ಎಂಬಂತಾಗಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ರೈತರು ಸಲ್ಲಿಸಿರುವ ಅರ್ಜಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಅನೇಕ ಅರ್ಜಿದಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈಗ ರಚನೆಗೊಂಡಿರುವ ಸಮಿತಿಗೆ ಫಾರಂ ನಂ. 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಭೂಮಿಯನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿದೆ. ಅಧಿಕಾರಿ ವರ್ಗ ಸಮಿತಿಯ ಅಧಿಕಾರ ವ್ಯಾಪ್ತಿ ಕುರಿತು ತಪ್ಪಾಗಿ ಅರ್ಥೈಸುತ್ತಿದೆ. ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಮೊದಲು ಸಭೆ ಕರೆಯಲು ಮುಂದಾಗಬೇಕು ಎಂದು ಬಗರ್‌ಹುಕುಂ ಭೂ ಮಂಜೂರಾತಿ ಸಮಿತಿ ಸದಸ್ಯ ಹಾರೋಗೊಳಿಗೆ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಒಟ್ಟಾರೆ ರೈತರು ಬಗರ್‌ಹುಕುಂ ಅರ್ಜಿಯ ಕತೆ ಏನಾಯ್ತು ಎಂದು ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಬಗರ್‌ಹುಕುಂ ಅರ್ಜಿದಾರ ರೈತರಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.