ADVERTISEMENT

ತೀರ್ಥಹಳ್ಳಿ: ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 8:50 IST
Last Updated 21 ಫೆಬ್ರುವರಿ 2012, 8:50 IST

ತೀರ್ಥಹಳ್ಳಿ: ದೇಶಕಂಡ ಅದ್ವಿತೀಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಡೆ, ನುಡಿ, ಆದರ್ಶ ನಮ್ಮ ಯುವಕರು ಪಾಲಿಸಿಕೊಂಡು ಹೋಗಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜಶೆಟ್ಟಿ ಹೇಳಿದರು.

 ಈಚೆಗೆ ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ `ವಾಜಪೇಯಿ ಕಪ್-2012~ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ವಾಜಪೇಯಿ ಅವರು ದೇಶದ ಯುವಜನತೆಯ ಮೇಲೆ ತುಂಬ ಭರವಸೆ ಇಟ್ಟಿದ್ದಾರೆ. ಯುವ ಶಕ್ತಿ ಸದ್ಬಳಕೆಯಿಂದ ದೇಶ ಕಟ್ಟುವ, ಮುನ್ನಡೆಸುವ ಹಾಗೂ ದೇಶ ರಕ್ಷಣೆಯ ಕನಸನ್ನು ಹೊಂದಿದ್ದಾರೆ. ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಡೆಯಲಿರುವ ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.

ತಾಲ್ಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹಸಿರುಮನೆ ನಂದನ್, ನವ ಭಾರತ ನಿರ್ಮಾಣದ ಕನಸು ಕಂಡಿರುವ ವಾಜಪೇಯಿ ಕನಸು ನನಸು ಮಾಡಲು ಯುವ ಜನತೆ ಸದಾ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯಬಿ.ಎಸ್. ಯಲ್ಲಪ್ಪ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸೊಪ್ಪುಗುಡ್ಡ ರಾಘವೇಂದ್ರ, ಸದಸ್ಯರಾದ ಸಂದೇಶ್ ಜವಳಿ, ವಿನೋದಾ ಶ್ರೀನಿವಾಸಶೆಟ್ಟಿ, ಜೆ. ಮಂಜುನಾಥಶೆಟ್ಟಿ,ಟಿ.ಎಲ್. ಸುರೇಶ್, ಅನಸೂಯಾ ರಂಗನಾಥ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ನಾಗರತ್ನಾ  ಚನ್ನವೀರಪ್ಪ, ಯುವ ಮೋರ್ಚಾದ ಕೊಡಿಗಿಬೈಲ್ ಪೂರ್ಣೇಶ್, ಕಿರಣ್, ಅಮರ್, ರಕ್ಷಿತ್ ಗೌಡ, ಗುಡ್ಡೆಕೊಪ್ಪ ಗ್ರಾ.ಪಂ ಉಪಾಧ್ಯಕ್ಷ ಗಣೇಶ್‌ಶೆಟ್ಟಿ, ಸದಸ್ಯ ದರಲಗೋಡು ನಾಗೇಂದ್ರ ಜೋಯ್ಸ ಮುಂತಾದವರಿದ್ದರು.

 ನಿರ್ಲಕ್ಷ್ಯದ ಆರೋಪ
ಭೂ ಮಂಜೂರಾತಿಗಾಗಿ ಅರ್ಜಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಭೂ ಮಂಜೂರಾತಿ ದೊರಕುತ್ತಿಲ್ಲ ಎಂದು ದಲಿತ ಮುಖಂಡ ಕೀಗಡಿ ಕೆ.ಜಿ. ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ಬಗರ್‌ಹುಕುಂ ಭೂಮಿ ಮಂಜೂರಾತಿ ನೀಡುವಲ್ಲಿ ಸೂಕ್ತಕ್ರಮ ಜರುಗಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೇವಲ ಹಣ ನೀಡಿದವರ ಅರ್ಜಿಗಳಿಗೆ ಮಾತ್ರ ಜೀವ ನೀಡಿ ಉಳಿದ ಅರ್ಜಿಗಳಿಗೆ ಹಲವಾರು ನೆಪಗಳನ್ನು ಹೇಳಿ ಕಡತದಿಂದ ಹೊರಗಿಡುತ್ತಿದ್ದಾರೆ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಅನೇಕರ ಅರ್ಜಿಗಳೇ ಮಾಯವಾಗಿವೆ ಎಂದು ಕೃಷ್ಣಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಬಡವರಿಗೆ ಭೂಮಿ ಮಂಜೂರಾತಿ ನೀಡಿದರೂ ವಿಸ್ತೀಣವನ್ನು ಕಡಿತಗೊಳಿಸಲಾಗುತ್ತದೆ. ಪರಿಶಿಷ್ಟ ಜಾತಿ, ವರ್ಗದವರ ಅನೇಕ ಅರ್ಜಿಗಳು ಇಲ್ಲದಾಗಿವೆ. ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯತನ ಧೋರಣೆಯನ್ನು ಮುಂದುವರಿಸಿದಲ್ಲಿ ಪ್ರತಿಭಟನೆ ಮಾರ್ಗವನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.