ADVERTISEMENT

ದಲಿತ ಕುಟುಂಬಗಳಿಗೆ ಕಿರುಕುಳ: ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:31 IST
Last Updated 29 ಮೇ 2018, 9:31 IST

ತೀರ್ಥಹಳ್ಳಿ: ಸರ್ಕಾರಿ ಭೂ ಪ್ರದೇಶದಲ್ಲಿ ಬದುಕಿಗಾಗಿ ಆಶ್ರಯಿಸಿರುವ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಕಿರುಕುಳ ನೀಡಲಾಗುತ್ತಿದೆ.ದಲಿತ ಕುಟುಂಬಗಳನ್ನು ಕಡೆಗಣಿಸಲಾಗುತ್ತಿದ್ದು ಅನೇಕ ವರ್ಷಗಳಿಂದ ಭೂ ಒಡೆತನದ ಬೇಡಿಕೆ ಈಡೇರಿಸಿಲ್ಲ ಎಂದ ಆರೋಪಿಸಿ ಸೋಮವಾರ ತಹಶೀಲ್ದಾರ್ ಕೊಠಡಿಗೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ದಲಿತರು ಬೀಗ ಹಾಕಿ ಪ್ರತಿಭಟಿಸಿದರು.

ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಸರ್ವೆ ನಂ.80ರಲ್ಲಿ ಒಟ್ಟು 103 ಎಕರೆ ವಿಸ್ತೀರ್ಣದ ಸರ್ಕಾರಿ ಭೂ ಪ್ರದೇಶವಿದೆ. ಈ ಪ್ರದೇಶಕ್ಕೆ ಕೆಲವರ ಹೆಸರಿನಲ್ಲಿ ಬಗರ್‌ಹುಕುಂ ಸಾಗುವಳಿ ಅಡಿಯಲ್ಲಿ ಮಂಜೂರಾತಿ ದೊರೆತಿದೆ. ಹೆಚ್ಚಿನ ಭೂ ಪ್ರದೆಶ ಒತ್ತುವರಿಯಾಗಿದೆ. ಇಲ್ಲಿನ 6 ದಲಿತ ಕುಟುಂಬಗಳು ಬಗರ್‌ಹುಕುಂ ಸಾಗುವಳಿ ಅಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಂತ್ಯಸಂಸ್ಕಾರ ಕ್ರಿಯಾದಿಗಳಿಗೆ ಈ ಪ್ರದೇಶವನ್ನು ಅವಲಂಬಿಸಿದ್ದಾರೆ ಎಂದು ದೂರಿದರು.

ಹಣ, ರಾಜಕೀಯ ಪ್ರಭಾವ ಬಳಸಿ ಕೆಲವರು ದಲಿತರಿಗೆ ಸೇರಿದ ಭೂ ಪ್ರದೇಶವನ್ನು ಆಕ್ರಮಿಸಿ ಅಡಿಕೆ, ಬಾಳೆ, ವಾಸದ ಗುಡಿಸಲುಗಳನ್ನು ನಾಶಪಡಿಸಿದ್ದಾರೆ. ಪ್ರಕರಣ ಕುರಿತು ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ದಲಿತರಿಗೆ ರಕ್ಷಣೆ ಒದಗಿಸಿ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ದಲಿತರಿಗೆ ಸೇರಿದ ಬಗರ್ ಹುಕುಂ ಭೂ ಪ್ರದೇಶವನ್ನು ಬಲಾಢ್ಯರು ಆಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸುವಂತೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಅವರಿಗೆ ಆದೇಶ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಕಾಚಾಚಾರಕ್ಕೆ ಸರ್ವೆ ನಡೆಸಿ ನೆಪ ಮಾತ್ರಕ್ಕೆ ತೆರವುಗೊಳಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ತೆರವುಗೊಂಡ ಪ್ರದೇಶವನ್ನು ಮತ್ತೆ ಆಕ್ರಮಿಸಿಕೊಳ್ಳಳಾಗಿದೆ. ಸುಮಾರು 60 ಎಕರೆ ಪ್ರದೇಶ ಒತ್ತುವರಿಯಾಗಿದ್ದು ದಲಿತರಿಗೆ ಭೂಮಿ ಇಲ್ಲದಂತಾಗಿದೆ. ಅನ್ಯಾಯ ಎಸಗಿದವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಕೀಗಡಿ ಕೃಷ್ಣಮೂರ್ತಿ, ಪ್ರತಿಭಟನೆಯ ಮುನ್ನೂಚನೆ ತಿಳಿದ ತಹಶೀಲ್ದಾರ್ ಕಚೇರಿಗೆ ಬಾರದೇ ಗೈರಾಗಿದ್ದಾರೆ. 1978ರಲ್ಲಿ ದರಖಾಸ್ತು ನಮೂನೆ-1 ರಲ್ಲಿ ಮಂಜೂರು ಕೋರಿ ಸಲ್ಲಿಸಿರುವ ಅರ್ಜಿಗೆ ಭೂ ಮಂಜೂರಾತಿಗೊಳಿಸಬೇಕು. ದಲಿತರಿಗೆ ಶಾಶ್ವತ ಜಮೀನು ದೊರಕಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ದಲಿತರ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡಾದ ಗಿರೀಶ್, ವೆಂಕಟೇಶ್, ಈಶ್ವರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.