ADVERTISEMENT

ದಸರಾ ಉತ್ಸವ: ರೂ 50 ಲಕ್ಷ ವೆಚ್ಚಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:05 IST
Last Updated 14 ಸೆಪ್ಟೆಂಬರ್ 2011, 6:05 IST

ಶಿವಮೊಗ್ಗ: ಕಳೆದ ಬಾರಿ ದಸರಾ ಉತ್ಸವಕ್ಕೆ ರೂ 25 ಲಕ್ಷ ಖರ್ಚು ಮಾಡಲಾಗಿದ್ದು, ಈ ಬಾರಿಯ ದಸರಾ ಉತ್ಸಕ್ಕೆ  ರೂ 50 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ದಸರಾ ಹಬ್ಬ ಆಚರಿಸಲು ನಗರಸಭೆ ತೀರ್ಮಾನಿಸಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ತಿಳಿಸಿದರು.

ನಗರಸಭೆ ಆವರಣದಲ್ಲಿ ಮಂಗಳವಾರ ದಸರಾ ಉತ್ಸವ ಆಚರಿಸುವ ಕುರಿತು ಹಮ್ಮಿಕೊಂಡಿದ್ದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ದಸರಾ ಉತ್ಸವವನ್ನು 9 ದಿನಗಳ ಕಾಲ ಆಚರಿಸಲು ತೀರ್ಮಾನಿಸಲಾಗಿದ್ದು, 3 ದಿನ ಯುವ ದಸರಾ, 3ದಿನ ಮಹಿಳಾ ದಸರಾ, ಮಕ್ಕಳ ದಸರಾ ಹಾಗೂ ಉಳಿದ 2 ದಿನ ಸಾಂಸ್ಕೃತಿಕ ದಿನಗಳಾಗಿ ಆಚರಿಸಲಾಗುವುದು ಎಂದರು.

ನಗರಸಭೆ ಸದಸ್ಯ ರಾಮು ಮಾತನಾಡಿ, ಈ ಬಾರಿ ದಸರಾದಲ್ಲಿ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಮತ್ತು ಮಳೆಗಾಲವಾದ್ದರಿಂದ ಮುಂಜಾಗೃತ  ಕ್ರಮವಾಗಿ ಕಲ್ಯಾಣ ಮಂಟಪ, ಸಮುದಾಯ ಭವನ, ಸುವರ್ಣ ಭವನಗಳಲ್ಲಿ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ದಸರಾ ಉತ್ಸವವನ್ನು ನಗರದ ವಿನೋಬನಗರದ ಭಾಗದಲ್ಲಿ ಏರ್ಪಡಿಸುವುದರಿಂದ ಗೋಪಾಳ, ಕಲ್ಲಳ್ಳಿ ಭಾಗದ ಜನತೆಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸದಸ್ಯ ಯೊಗೀಶ್ ಅಭಿಪ್ರಾಯಪಟ್ಟರು.
ವಸ್ತುಪ್ರದರ್ಶನ ಮತ್ತಿತರರ ಪ್ರದರ್ಶನಗಳನ್ನು ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬೇಕು.

ಇದರಿಂದ ವೀಕ್ಷಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸದಸ್ಯೆ ವಿಜಯಲಕ್ಷ್ಮೀ ಸಿ. ಪಾಟೀಲ್ ಸಲಹೆ ನೀಡಿದರು.ನಂತರ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ನಗರಸಭೆ ಸದಸ್ಯರ ಸಲಹೆ, ಒಪ್ಪಿಗೆ ಮೇರೆಗೆ ದಸರಾ ಹಬ್ಬದ ಕಾರ್ಯಕ್ರಮಗಳಿಗೆ ವಿವಿಧ ಆಯೋಜಕರ ಸಮಿತಿ ರಚಿಸಲಾಗುವುದು ಹಾಗೂ ಮಕ್ಕಳ ದಸರಾ ಕಾರ್ಯಕ್ರಮ ಸಹ ಏರ್ಪಡಿಸಲು ಸದಸ್ಯರ ಜೊತೆ ಚರ್ಚಿಸಲಾಗುವುದು ಎಂದ ಅವರು, ಈ ಬಾರಿ ಸ್ತಬ್ಧಚಿತ್ರಗಳನ್ನು ಮಾಡಲು ಸಹ ತೀರ್ಮಾನಿಸಲಾಗಿದ್ದು, ಸುಮಾರು 120 ವಿವಿಧ ಸ್ಥಳೀಯ ಭಜನಾ ಮಂಡಳಿಗಳಿಗೆ ಆಹ್ವಾನ ನೀಡುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದರು.
ಸಭೆಯಲ್ಲಿ ಆಯುಕ್ತ ರಮೇಶ್ ಉಪಸ್ಥಿತರಿದ್ದರು.

ವಾರ್ಷಿಕ ಮಹಾಸಭೆ
ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ 2010-11 ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಸೆ.18 ರಂದು ಬೆಳಿಗ್ಗೆ 10.30ಕ್ಕೆ ನಗರದ ಬಾಲರಾಜ್ ರಸ್ತೆಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.