ADVERTISEMENT

ದೇಶದ ಸಾರ್ವಭೌಮತೆಗೆ ಧಕ್ಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 5:40 IST
Last Updated 13 ಜುಲೈ 2012, 5:40 IST

ಶಿವಮೊಗ್ಗ: ಜಮ್ಮು-ಕಾಶ್ಮೀರ ಕುರಿತ ಸಂವಾದಕಾರ ವರದಿ ರಾಷ್ಟ್ರವಿರೋಧಿಯಾಗಿದೆ ಎಂದು ಆರೋಪಿಸಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಗುರುವಾರ ಸಂಜೆ ಜಮ್ಮು-ಕಾಶ್ಮೀರ ಉಳಿಸಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿ ರಾಂ, ಈ ವರದಿ ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವಂತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಈ ವರದಿ ಜಾರಿಗೊಳಿಸಬಾರದು; ತಿರಸ್ಕರಿಸಬೇಕು ಆಗ್ರಹಿಸಿದರು.

2010ರ ಅ. 13ರಂದು ಜಮ್ಮು -ಕಾಶ್ಮೀರದ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ದಿಲೀಪ್ ಪಡಗಾಂವ್‌ಕರ್, ಪ್ರೊ.ರಾಧಾಕುಮಾರ್, ಎಂ.ಎಂ. ಅನ್ಸಾರಿ ಅವರ ನೇತೃತ್ವದಲ್ಲಿ ಸಂವಾದಕರ ತಂಡವೊಂದನ್ನು ಕೇಂದ್ರ ಸರ್ಕಾರ ರಚನೆ ಮಾಡಿತ್ತು. ಈ ತಂಡ 2011ರ ಅ. 12ರಂದು ತನ್ನ ವರದಿ ಸಲ್ಲಿಸಿದೆ. ಈ ವರದಿ ಸಂಪೂರ್ಣ ಅಸಂಬದ್ಧತೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಒಂದರ್ಥದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬೇಡಿಕೆಗೆ ಅಧಿಕೃತ ಮುದ್ರೆಯನ್ನೊತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಜಮ್ಮು -ಕಾಶ್ಮೀರ ರಾಜ್ಯದಲ್ಲಿ ಈಗಲೂ ಭಯದ ವಾತಾವರಣವಿದೆ. ಭಾರತದ ಜತೆಗಿನ ಸಂಬಂಧವನ್ನು ಕತ್ತರಿಸಿಕೊಂಡು ಪ್ರತ್ಯೇಕ ಅಸ್ತಿತ್ವ ಘೋಷಿಸಿಕೊಳ್ಳಲು ಪ್ರತ್ಯೇಕತಾವಾದಿಗಳು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲೇ ಸಂವಾದಕಾರರು ಸೂಚಿಸಿದ ಸಲಹೆಗಳು ಭಯಾನಕವಾಗಿವೆ ಎಂದು ಅವರು ದೂರಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ, ಯಾವುದೇ ಕಾರಣಕ್ಕೂ ಸಂವಾದಕಾರರ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬಾರದು. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ಹಿನ್ನೆಲೆಯಲ್ಲಿ ಭಾರತೀಯರೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಸಂವಾದಕಾರರ ವರದಿಯನ್ನು ಧಿಕ್ಕರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು, ಪದಾಧಿಕಾರಿಗಳಾದ ನಟರಾಜ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.