ADVERTISEMENT

ದೈಹಿಕ ಶಿಕ್ಷಣ ಬೋಧಕರಿಲ್ಲದ 25 ಸಾವಿರ ಶಾಲೆಗಳು!

ಶಿಕ್ಷಣ ಇಲಾಖೆ ಅವಾಂತರ: ನಾಲ್ಕೇ ತಿಂಗಳಿಗೆ ಹೊರಗುತ್ತಿಗೆ ಶಿಕ್ಷಕರೂ ಮನೆಗೆ

ಚಂದ್ರಹಾಸ ಹಿರೇಮಳಲಿ
Published 17 ಆಗಸ್ಟ್ 2016, 17:04 IST
Last Updated 17 ಆಗಸ್ಟ್ 2016, 17:04 IST
ಮಕ್ಕಳ ಕ್ರೀಡಾ ಚಟುವಟಿಕೆ (ಸಂಗ್ರಹ ಚಿತ್ರ)
ಮಕ್ಕಳ ಕ್ರೀಡಾ ಚಟುವಟಿಕೆ (ಸಂಗ್ರಹ ಚಿತ್ರ)   

ಶಿವಮೊಗ್ಗ: ರಾಜ್ಯದ 25 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಹೇಳಿಕೊಡುವವರೇ ಇಲ್ಲದ ಕಾರಣ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳು ಕುಂಠಿತವಾಗಿವೆ.

ಹತ್ತು ವರ್ಷಗಳಿಂದ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ. ಡಿ.ಪಿ.ಇಡಿ ಮಾಡಿದ ಸಾವಿರಾರು ಶಿಕ್ಷಕರು ನಿತ್ಯವೂ ಕೆಲಸ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅಲೆದಾಡುತ್ತಿದ್ದಾರೆ.

ನಿಯಮದಂತೆ 150ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಆದರೆ, ರಾಜ್ಯದ ಶೇ 50ರಷ್ಟು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಭರ್ತಿ ಮಾಡಲು ಸರ್ಕಾರ ಮುಂದಾಗಿಲ್ಲ.

ಮೂರು ವರ್ಷಗಳ ಹಿಂದೆ 960 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವವನ್ನೂ ಕಳುಹಿಸಲಾಗಿತ್ತು. ಆದರೆ, ಇದುವರೆಗೂ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ.

ಕಳೆದ ವರ್ಷ 7 ಸಾವಿರ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದರೂ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಕುರಿತು ಚಕಾರ ಎತ್ತಲಿಲ್ಲ.

ಅರೆಕಾಲಿಕ ನೌಕರಿಗೂ ಅಲೆದಾಟ: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಸ್ಥಾನಗಳನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು 2015–16ನೇ ಸಾಲಿನಲ್ಲಿ ಅವಕಾಶ ನೀಡಲಾಗಿತ್ತು. ಪ್ರಕ್ರಿಯೆ ಪೂರ್ಣಗೊಂಡು ಅರ್ಹ ಪ್ರತಿಭಾವಂತರ ನೇಮಕವೂ ಆಯಿತು.

ಆದರೆ, ಪ್ರತಿಯೊಬ್ಬ  ಶಿಕ್ಷಕರನ್ನು ವಾರದಲ್ಲಿ ಮೂರು ನಾಲ್ಕು ಶಾಲೆಗಳಿಗೆ ಅಲೆದಾಡಿಸಲಾಯಿತು. 2015ರ ಡಿಸೆಂಬರ್‌ನಲ್ಲಿ ನೇಮಕವಾಗಿ ಹೀಗೆ ಶಾಲೆಯಿಂದ ಶಾಲೆಗೆ ಅಲೆದಾಡಿದ ಶಿಕ್ಷಕರನ್ನು ಮಾರ್ಚ್‌ ಅಂತ್ಯಕ್ಕೆ ಕೈ ಬಿಡಲಾಯಿತು. 2016–17ನೇ ಸಾಲಿನಲ್ಲಿ ಮತ್ತೆ ತೆಗೆದುಕೊಳ್ಳುವ ಭರವಸೆ ನೀಡಿದ್ದ ಸರ್ಕಾರ, ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳಾದರೂ ಅರೆಕಾಲಿಕ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕಳೆದ ವರ್ಷ ಕೆಲಸ ಮಾಡಿದ್ದವರು ನಿತ್ಯವೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.

ಕಳೆದ ವರ್ಷ ಇಂತಹ ಅರೆಕಾಲಿಕ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನಿಗದಿ ಮಾಡಿದ್ದು ತಿಂಗಳಿಗೆ ₹ 8,400 ಸಂಬಳ. ಆದರೆ, ನೀಡಿದ್ದು ₹ 5.427 ಮಾತ್ರ. ಉಳಿದ ಹಣ ಗುತ್ತಿಗೆ ಕಂಪೆನಿ ತಿಜೋರಿ ಸೇರಿತ್ತು.

ನೇಮಕಾತಿಗೆ ವಯೋಮಿತಿಯ ಆತಂಕ: ಹತ್ತು ವರ್ಷಗಳಿಂದ ನೇಮಕಾತಿ ನಡೆಯದ ಕಾರಣ ಹಲವು ಶಿಕ್ಷಕರು ವಯೋಮಿತಿ ದಾಟಿದ್ದಾರೆ. ಕೆಲವರು ವಯೋಮಿತಿ ದಾಟುವ ಆತಂಕದಲ್ಲಿ ಇದ್ದಾರೆ. ಕೆಲವರು ನೇಮಕಾತಿ ಭರಸವೆಯನ್ನೇ ಕಳೆದುಕೊಂಡು ಹತಾಶರಾಗಿದ್ದಾರೆ.

‘ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತದೆ ಎನ್ನುವ ನಂಬಿಕೆಯಿಂದ 10 ವರ್ಷ ಕಳೆದಿದ್ದೇವೆ. ಈಗ ಆ ಭರವಸೆ ಇಲ್ಲವಾಗಿದೆ. ಹಲವು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಉದ್ಯೋಗಾಕಾಂಕ್ಷಿ ಶಿಕ್ಷಕರಿಗೆ ಕೊನೆಯ ಅವಕಾಶ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎನ್ನುತ್ತಾರೆ ಶಿಕ್ಷಕಿ ವೇದಾವತಿ.

‘ಸರ್ಕಾರ 1ರಿಂದ 7ನೇ ತರಗತಿಯ ಮಕ್ಕಳಿಗೆ ಯೋಗ, ಕ್ರೀಡೆ, ಆರೋಗ್ಯ ಶಿಕ್ಷಣ ನೀಡಬೇಕು ಎಂದು ಹೇಳುತ್ತದೆ. ಆದರೆ, ರಾಜ್ಯದ ಅರ್ಧದಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲದಿರುವಾಗ ಈ ರೀತಿಯ ಶಿಕ್ಷಣ ಮಕ್ಕಳಿಗೆ ಹೇಗೆ ಸಿಗಲು ಸಾಧ್ಯ? ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುವ ಮಕ್ಕಳು ಪಠ್ಯೇತರ ಚಟುವಟಿಕೆಗಳಿಂದ ದೂರ ಉಳಿಯುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ಭದ್ರಾವತಿಯ ಶ್ರೀಕಾಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.