ADVERTISEMENT

ನೀರಿನ ಬಳಕೆ ಬಗ್ಗೆ ಜಾಗೃತಿ ಅಗತ್ಯ: ಚಕ್ರವಾಕ ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:44 IST
Last Updated 10 ಮಾರ್ಚ್ 2018, 8:44 IST

ತೀರ್ಥಹಳ್ಳಿ: ‘ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸದೇ ಹೋದರೆ ಜಲಕ್ಷಾಮ ಎದುರಿಸುತ್ತಿರುವ ರಾಷ್ಟ್ರಗಳ ಸಾಲಿಗೆ ನಾವೂ ಸೇರುವ ಅಪಾಯವಿದೆ. ನೀರಿನ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಈಗ ಎದುರಾಗಿದೆ’ ಎಂದು ಜಲ ತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಆರಗ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಡಚಾದ್ರಿ ಇಕೋ ಕ್ಲಬ್‌ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಈಚೆಗೆ ಹಮ್ಮಿಕೊಂಡಿದ್ದ ‘ನೀರಿನ ಮಹತ್ವ, ಸದ್ಬಳಕೆ ಮತ್ತು ಮಳೆಕೊಯ್ಲು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ನೀರಿನ ಬಳಕೆಯ ಜಾಗೃತಿ ನಮ್ಮಲ್ಲಿ ಮೂಡದೇ ಹೋದರೆ ಜಲಕ್ಷಾಮ ಎದುರಿಸುತ್ತಿರುವ ಸುಡಾನ್, ದಕ್ಷಿಣ ಆಫ್ರಿಕಾದಂಥ ರಾಷ್ಟ್ರಗಳ ಶೋಚನೀಯ ಪರಿಸ್ಥಿತಿ ನಮ್ಮಲ್ಲೂ ಎದುರಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ನೀರು ಜೀವಜಲ, ಶಕ್ತಿಯ ರೂಪ, ಸಕಲ ಜೀವಸಂಕುಲಕ್ಕೂ ನೀರು ಅಗತ್ಯ. ವಿದ್ಯಾರ್ಥಿಗಳು ತಮ್ಮ ಶಾಲೆ, ಮನೆಯ ಪರಿಸರದಲ್ಲಿ ನೀರು ಪೋಲಾಗುವುದನ್ನು ತಡೆಯುವ ಜೊತೆಗೆ ಜನರಲ್ಲಿ ನೀರಿನ ಮಹತ್ವ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಉಪನ್ಯಾಸದ ಕೊನೆಯಲ್ಲಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಸಪ್ರಶ್ನೆಯಲ್ಲಿ ಸರಿಯುತ್ತರ ನೀಡಿದ ಹತ್ತು ವಿದ್ಯಾರ್ಥಿ
ಗಳಿಗೆ ಸುಬ್ರಹ್ಮಣ್ಯ ಅವರು ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು.

ಹಿರಿಯ ಶಿಕ್ಷಕ ಈ.ಬಿ.ಶೋಭನ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಶ್ರೀನಿಧಿ ಪ್ರಾರ್ಥಿಸಿದರು. ಶಿಕ್ಷಕಿ ಸುಧಾ ಹೆಗಡೆ ಸ್ವಾಗತಿಸಿದರು. ಇಕೋ ಕ್ಲಬ್‌ನ ಸಂಚಾಲಕ ರಾಮಕೃಷ್ಣ ನಿರೂಪಿಸಿದರು. ಶಿಕ್ಷಕಿ ರಜನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.