ADVERTISEMENT

ಪಕ್ಷಪಾತ ಧೋರಣೆ ಆರೋಪ: ಠಾಣೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:16 IST
Last Updated 4 ಸೆಪ್ಟೆಂಬರ್ 2013, 5:16 IST

ತೀರ್ಥಹಳ್ಳಿ: ಜನಸಾಮಾನ್ಯರಿಗೆ ತೀರ್ಥಹಳ್ಳಿ ಪೊಲೀಸ್ ಠಾಣಾಧಿಕಾರಿಯಿಂದ ಯಾವುದೇ ರಕ್ಷಣೆ  ಸಿಗುತ್ತಿಲ್ಲ. ಅನ್ಯಾಯದ ವಿರುದ್ಧ ಠಾಣೆಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳದೇ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಮಂಗಳವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಗುಡ್ಡೇಕೊಪ್ಪ ಗ್ರಾಮದ ಕೊಟ್ಟಿಗೆಯೊಂದರಲ್ಲಿ ಕಟ್ಟಿಹಾಕಿದ್ದ ಜಾನುವಾರು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಈ ಕುರಿತು ಪಿಎಸ್‌ಐ ತನಿಖೆ ನಡೆಸಿಲ್ಲ. ದೂರನ್ನೂ ದಾಖಲಿಸಿ ಕೊಂಡಿಲ್ಲ.

ದುಡ್ಡು ಕೊಟ್ಟವರಿಗೆ ಮಾತ್ರ ಪೊಲೀಸ್ ಠಾಣೆಯಲ್ಲಿ ನ್ಯಾಯ, ಮನ್ನಣೆ ಸಿಗುವುದಾದರೆ ಸಾಮಾನ್ಯ ಜನರ ಪಾಡೇನು ಎಂದು ಆರಗಜ್ಞಾನೇಂದ್ರ, ಜಿ.ಪಂ. ಸದಸ್ಯ ಬೇಡನಬೈಲು ಯಲ್ಲಪ್ಪ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಕ್ಕೋಡಬೈಲು ರಾಘವೇಂದ್ರ ಭಟ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಾಗರಾಜಶೆಟ್ಟಿ ಮತ್ತು ಇತರರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಎಸ್‌ಐ ಚಂದ್ರಶೇಖರ್, ಕರ್ತವ್ಯ ಲೋಪ ನಡೆದಿಲ್ಲ. ಗುಡ್ಡೇಕೊಪ್ಪದಲ್ಲಿ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ ಈ ಬಗ್ಗೆ ನಾಕಾ ಬಂಧಿ ನಡೆಸಿ ಕೃತ್ಯ ಎಸಗಿರುವವರ ವಿರುದ್ಧ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿಷಯ ತಿಳಿದು ಠಾಣೆಗೆ ಧಾವಿಸಿದ ವೃತ್ತ ಪೊಲೀಸ್ ನಿರೀಕ್ಷಕ ಬಸವರಾಜ್ ಅವರನ್ನು ಕುರಿತು ಪ್ರತಿಭಟನಾಕಾರರು ಠಾಣೆಯಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಎಚ್ಚರಿಸಿದರು. ಜಾನುವಾರು ಕಳವು ಪತ್ತೆಹಚ್ಚಲು ವಿಶೇಷ ತಂಡ ರಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ವಾಪಸ್ಸಾದರು.

ಪಂಚಾಯ್ತಿ ಸದಸ್ಯರಾದ ಸಂದೇಶ್ ಜವಳಿ, ರಾಜೀವನ್, ಸೊಪ್ಪುಗುಡ್ಡೆ ರಾಘವೇಂದ್ರ, ಜೆ.ಮಂಜುನಾಥಶೆಟ್ಟಿ, ಬಜರಂಗದಳದ ಸಂತೋಷ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಹಸಿರುಮನೆ ನಂದನ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.