ADVERTISEMENT

ಪ.ಪಂ. ಸಾಮಾನ್ಯ ಸಭೆ:ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:20 IST
Last Updated 8 ಫೆಬ್ರುವರಿ 2011, 6:20 IST

ಸೊರಬ: ಸದಸ್ಯರ ನಡುವಿನ ಮಾತಿನ ಚಕಮಕಿ, ಗದ್ದಲ, ವಾಗ್ವಾದಗಳ ನಡುವೆ ಇಲ್ಲಿನ ಪ.ಪಂ. ಸಾಮಾನ್ಯ ಸಭೆ ಸೋಮವಾರ ನಡೆಯಿತು. ಅಧ್ಯಕ್ಷರು ಶಾಲೆ ಕಲಿತಿಲ್ಲ ಎಂದು ಸದಸ್ಯ ಡಿ.ಆರ್. ಶ್ರೀಧರ್ ಹೇಳಿದ್ದು, ಭಾರೀ ವಾಗ್ವಾದಕ್ಕೆ ಕಾರಣ ಆಯಿತು. ನಂತರ, ಕೈಗೊಳ್ಳಬೇಕಾದ ನಿರ್ಣಯಗಳಿಗೆ ವಿರೋಧ, ಕಾಮಗಾರಿಗಳ ಪ್ರಗತಿ, ಕಳಪೆ ಆರೋಪ ವಿಚಾರಗಳು ಬಂದಂತೆಲ್ಲಾ ಆರೋಪ- ಪ್ರತ್ಯಾರೋಪಗಳ ಸುರಿಮಳೆ ಆಯಿತು.

ಪಂಚಾಯ್ತಿ ವ್ಯಾಪ್ತಿಯ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಆದ್ಯತೆ ನೀಡುವ ಮೂಲಕ ಅಕ್ರಮ-ಸಕ್ರಮಕ್ಕೆ ಮುಂದಾಗಬೇಕು, ಹರಾಜು ಮೂಲಕ ಖಾಲಿ ನಿವೇಶನ ಹಂಚಿಕೆ ಮಾಡಬೇಕು ಎಂಬ ವಿಷಯ ಕುರಿತು ಸಭೆಯಲ್ಲಿ ಪ್ರಸ್ತಾವ ಕೇಳಿ ಬರುತ್ತಿದ್ದಂತೆ, ಹಾಲಿ ವಾಸ ಮಾಡುತ್ತಾ ಇರುವವರ ಪಟ್ಟಿ ನೀಡಿ ಎಂದು ಸದಸ್ಯರಾದ ಸಮೀವುಲ್ಲಾ ಹಾಗೂ ದಿನಕರ್ ಭಾವೆ ಒತ್ತಾಯಿಸಿ, ನಿರ್ಣಯಕ್ಕೆ ವಿರೋಧ ಸೂಚಿಸಿದರು.

ಈ ಗದ್ದಲದ ನಡುವೆ ತಮಗೆ ಮಾತನಾಡಲು ಸಾಧ್ಯ ಆಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡ ನಾಮನಿರ್ದೇಶಿತ ಸದಸ್ಯ ಅಣ್ಣಪ್ಪ ಸಭಾತ್ಯಾಗ ಮಾಡಲು ಮುಂದಾದರು.
ಮಾತು ಅವಾಚ್ಯ ಶಬ್ದಗಳತ್ತ ಹೊರಳುತ್ತಿದ್ದಂತೆ, ಸದಸ್ಯೆ ಗೌರಮ್ಮಎಸ್. ಭಂಡಾರಿ ಮಾತನಾಡಿ, ‘ಹೆಣ್ಣು ಮಕ್ಕಳಿದ್ದಾರೆ ಎಂಬ ಪ್ರಜ್ಞೆ ಇರಲಿ, ಅವರಿಗೆ ಗೌರವ ಕೊಡುವುದನ್ನು ಕಲಿಯಿರಿ’ ಎಂದು ದಬಾಯಿಸಿದರು.

‘ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ನಾನು ಅದನ್ನು ಸಾಬೀತು ಮಾಡುತ್ತೇನೆ’ ಎಂದು ಆರೋಪಿಸಿದ ಸದಸ್ಯ ಶ್ರೀಧರ್, ‘ಅದು ಸುಳ್ಳಾದಲ್ಲಿ ನನ್ನ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಿ’ ಎಂದು ಸವಾಲೆಸೆದರು. ಆದರೆ, ಇಷ್ಟೆಲ್ಲಾ ರಾದ್ಧಾಂತಗಳ ಮಧ್ಯೆ ಮಧ್ಯೆ ಸದಸ್ಯರ ನಡುವೆ ಕಂಡು ಬಂದ ಸೌಹಾರ್ದತೆ ಅಚ್ಚರಿ ಮೂಡಿಸುವಂತಿತ್ತು.

ಶಾಸಕ ಹಾಲಪ್ಪ ಸಚಿವರಾಗಿದ್ದಾಗ ಕೆಲ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮವನ್ನು ಮೆಸ್ಕಾಂ ಜರುಗಿಸಿಲ್ಲ. ಪಾರದರ್ಶಕತೆ ಪಾಲಿಸುತ್ತಿಲ್ಲ ಎಂದು ಆರೋಪಿಸಿದ ಅನೇಕ ಸದಸ್ಯರು, ಯಾವುದೇ ಕಾಮಗಾರಿ ಕೈಗೊಳ್ಳುವಾಗ ಎಸ್ಟಿಮೇಶನ್ ಪ್ರತಿಯನ್ನು ಸದಸ್ಯರಿಗೆ ಒದಗಿಸುವಂತೆ, ಕುಣಜೆಬೈಲು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ತ್ವರಿತ ಕೈಗೊಳ್ಳುವಂತೆ ಸಲಹೆ ನೀಡಿದರು.ವಿಜಯಾ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಮುಖ್ಯಾಧಿಕಾರಿ ನರಸಿಂಹಮೂರ್ತಿ, ಸದಸ್ಯರು, ಅಧಿಕಾರಿಗಳು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.