ADVERTISEMENT

ಪರಿವರ್ತನಾ ಯಾತ್ರೆ ನಾಳೆ ಶಿಕಾರಿಪುರಕ್ಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 5:57 IST
Last Updated 26 ಡಿಸೆಂಬರ್ 2017, 5:57 IST

ಶಿಕಾರಿಪುರ: ‘ಪಟ್ಟಣಕ್ಕೆ ಡಿ.27ರಂದು ಮಧ್ಯಾಹ್ನ 3ಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆ ಆಗಮಿಸಲಿದೆ. ನೂತನ ಸಂತೆ ಮೈದಾನದಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ’ ಎಂದು ಶಾಸಕ ಬಿ.ವೈ.ರಾಘವೇಂದ್ರ ತಿಳಿಸಿದರು.

‘135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಾಗಲಿರುವ ಪರಿವರ್ತನಾ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಡಿ.27ರಂದು ಹೊನ್ನಾಳಿಯಿಂದ ಶಿಕಾರಿಪುರ ಪಟ್ಟಣಕ್ಕೆ ಪರಿವರ್ತನಾ ಯಾತ್ರೆ ಆಗಮಿಸಲಿದೆ. ಹುಚ್ಚ ರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ನಂತರ ಪ್ರಮುಖ ಬೀದಿಗಳಲ್ಲಿ ಪರಿವರ್ತನಾ ಯಾತ್ರೆಯು ಸಂಚರಿಸಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸೇರಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಯಡಿಯೂರಪ್ಪ ಅವರ ಮನವಿಯಂತೆ ಶಿವಮೊಗ್ಗದಿಂದ ಶಿಕಾರಿಪುರ, ರಾಣೆಬೆನ್ನೂರು ಮಾರ್ಗದ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಿದೆ. ರೈಲ್ವೆ ಮಾರ್ಗದ ಅನುಷ್ಠಾನಕ್ಕಾಗಿ 4 ತಿಂಗಳಲ್ಲಿ ಅಂತಿಮ ಹಂತದ ಸರ್ವೆ ಕಾರ್ಯ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಂತೆ ನಿಕೇತನ್ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ಸೂಚಿಸಿದೆ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಾನಾಯ್ಕ, ಮುಖಂಡರಾದ ಕೆ.ಹಾಲಪ್ಪ, ಟಿ.ಎಸ್‌. ಮೋಹನ್‌, ಕಬಾಡಿ ರಾಜಪ್ಪ, ಕೆ.ಜಿ.ವಸಂತಗೌಡ್ರು, ಎಂ.ಬಿ. ಚನ್ನವೀರಪ್ಪ, ಬಿ.ಡಿ. ಭೂಕಾಂತ್‌, ಚಾರಗಲ್ಲಿ ಪರಶುರಾಮ್‌, ಗಿರೀಶ್‌ ಧಾರಾವಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.