ADVERTISEMENT

ಪರ್ಯಾಯ ಇಂಧನ ವ್ಯವಸ್ಥೆ ಅತ್ಯಗತ್ಯ

​ಪ್ರಜಾವಾಣಿ ವಾರ್ತೆ
Published 3 ಮೇ 2011, 8:10 IST
Last Updated 3 ಮೇ 2011, 8:10 IST

ಸಾಗರ: ಪ್ರಪಂಚದ ಎಲ್ಲೆಡೆ ತೈಲನಿಕ್ಷೇಪಗಳು ಬರಿದಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ನಾವು ಕಂಡುಕೊಳ್ಳದಿದ್ದರೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವೇ ಇಲ್ಲ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಹೇಳಿದರು.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ಶೆಡ್ತಿಕೆರೆಯ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಸೋಮವಾರ ಏರ್ಪಡಿಸಿದ್ದ ಜೈವಿಕ ಇಂಧನ ಕಾರ್ಯಾಗಾರವನ್ನು  ಪ್ರಗತಿಪರ ಕೃಷಿಕ ಕುರುವರಿ ಸೀತಾರಾಂ ಅವರಿಗೆ ಜೈವಿಕ ಇಂಧನ ಸಸಿ ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತೈಲ ನಿಕ್ಷೇಪಗಳು ಬರಿದಾಗುತ್ತಿವೆ ಎಂಬ ಮಾಹಿತಿ 1995ರಿಂದಲೇ ವಿವಿಧ ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಲಭ್ಯವಾಗುತ್ತಿದೆ. ಒಂದು ಮೂಲದ ಪ್ರಕಾರ 2038ರ ಹೊತ್ತಿಗೆ ಇಂಧನ ಕ್ಷಾಮ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಬಗ್ಗೆ ನಾವು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ರೈತರು ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಿಂದಲೇ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಜತ್ರೋಪಾ, ಸೀಮಾರೂಬ ದಂತಹ ಜೈವಿಕ ಸಸ್ಯಗಳನ್ನು ಬೆಳೆಯುವಂತೆ ಮಂಡಳಿಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ತಾ.ಪಂ. ಅಧ್ಯಕ್ಷ ಪ್ರಕಾಶ್ ಲ್ಯಾವಿಗೆರೆ ಮಾತನಾಡಿ, ಜೈವಿಕ ಇಂಧನ ಸಸ್ಯ ಬೆಳೆಯಲು ರೈತರಿಗೆ ನೆರವು ನೀಡುವ ಜತೆಗೆ ಅರಿವು ಮೂಡಿಸುವ ಕೆಲಸವೂ ಆಗಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದ ಹೊರತು ಕೃಷಿಯ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.

ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಪಿ.ಪಿ. ಬ್ಯಾನರ್ಜಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ, ತಾ.ಪಂ. ಇಒ    ಡಾ.ಎಸ್. ಶಶಿಕುಮಾರ್, ವೃಕ್ಷಲಕ್ಷ ಆಂದೋಲನದ ಬಿ.ಎಚ್. ರಾಘವೇಂದ್ರ, ತಾ.ಪಂ. ಸದಸ್ಯ ಹರೀಶ್ ಹಾಜರಿದ್ದರು.

ಶ್ರೀಧರ ಅವಧಾನಿ ಪ್ರಾರ್ಥಿಸಿದರು. ವಿಜ್ಞಾನ ಕೇಂದ್ರದ ಕಾರ್ಯದರ್ಶಿ ವೆಂಕಟೇಶ್ ಕವಲಕೋಡು ಸ್ವಾಗತಿಸಿದರು. ಆನೆಗುಳಿ ಸುಬ್ರಾವ್ ಪ್ರಾಸ್ತಾವಿಕ ಮಾತನಾಡಿದರು. ನಾಗಭೂಷಣ ವಂದಿಸಿದರು.ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.