ADVERTISEMENT

ಪ್ರತಿಭಟನಾ ಧರಣಿ: ದೂರು ದಾಖಲು

ಕಾರ್ಗಲ್ ಪಟ್ಟಣ ಪಂಚಾಯ್ತಿ ಮಾಸಿಕ ಸಭೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:41 IST
Last Updated 8 ಡಿಸೆಂಬರ್ 2012, 6:41 IST

ಕಾರ್ಗಲ್: ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯ ಆರಂಭದಲ್ಲಿಯೇ ಆರೋಪ ಪ್ರತ್ಯಾರೋಪಗಳ ಸುರಿಮಳೆಯೊಂದಿಗೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ಸದಸ್ಯರು ಸಭಾಂಗಣದ ಮುಂಭಾಗ ಕುಳಿತು ಧರಣಿ ನಡೆಸಿದರು.

ಧರಣಿನಿರತರನ್ನು ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ಮತ್ತು ಮುಖ್ಯಾಧಿಕಾರಿ ಎಂ.ಜಿ. ರಮೇಶ್ ಸಮಾಧಾನ ಪಡಿಸಲು ಪ್ರಯತ್ನಿಸಿ ಆರಂಭದಲ್ಲಿ ವಿಫಲರಾದರು. ಧರಣಿನಿರತ ಬಿಜೆಪಿ ಸದಸ್ಯ ರಾಜ್‌ಕುಮಾರ್ ಮಾಸಿಕ ಸಭೆ ನಡೆಸುವುದನ್ನು ವಿರೋಧಿಸಿ ಪ್ರಶ್ನಿಸುವಾಗ ಅವರ ಕೈ ತಗುಲಿ ಅಧ್ಯಕ್ಷರ ಮೇಜಿನ ಮೇಲಿನ ಗಾಜು ಹೊಡೆಯಿತು ಎಂದು ಹೇಳಲಾಗಿದೆ.

ಕೂಡಲೇ ಗಾಜು ಒಡೆದ ಘಟನೆ ಬಗ್ಗೆ ಮುಖ್ಯಾಧಿಕಾರಿ ಎಂ.ಜಿ. ರಮೇಶ್ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಸದಸ್ಯ ರಾಜ್‌ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಮಾಸಿಕ ಸಭೆ ನಡೆಯಬಾರದೆಂಬ ದುರುದ್ದೇಶದಿಂದ ತಮ್ಮ ಮೇಜಿನ ಗಾಜನ್ನು ಸದಸ್ಯ ರಾಜ್‌ಕುಮಾರ್ ಒಡೆದಿದ್ದಾರೆ ಎಂದು ಅಧ್ಯಕ್ಷ ಕೆ.ಸಿ. ಹರೀಶ್‌ಗೌಡ ಆರೋಪಿಸಿದ್ದಾರೆ. ಗಾಜು ಒಡೆದ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಸದಸ್ಯ ಎಸ್.ಎಲ್. ರಾಜ್‌ಕುಮಾರ್ ಸಮಜಾಯಿಸಿ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಸೇನೆ ಸದಸ್ಯ ಕೆ. ರವಿ ಜೋಗ್ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲದ ಸದಸ್ಯರು ಇಂಥ ಉದ್ಧಟತನದ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ. ಜೆಡಿಎಸ್ ಸದಸ್ಯ ರಾಜೇಂದ್ರ ಮಾತನಾಡಿ, ಗಾಜು ಒಡೆದ ಘಟನೆಯಲ್ಲಿ ಯಾವುದೇ ದುರುದ್ದೇಶಗಳಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT