ADVERTISEMENT

ಪ್ರಧಾನಿ ಸಮ್ಮುಖದಲ್ಲೇ ನಡೆದಿದೆ ಅಭ್ಯರ್ಥಿಗಳ ಆಯ್ಕೆ

ಸಾಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:26 IST
Last Updated 21 ಏಪ್ರಿಲ್ 2018, 11:26 IST

ಸಾಗರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲೆ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು.

ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಸೂಲಿಬಾಜಿ ಮಾಡಿ ನಾನು ಟಿಕೆಟ್ ಪಡೆದಿದ್ದೇನೆ ಎಂದು ಕೆಲವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ’ ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಸಂಬಂಧ ರಾಜಿ ಪ್ರಯತ್ನಕ್ಕೆ ಮುಂದಾಗುತ್ತೀರಾ ಎಂಬ ಪ್ರಶ್ನೆಗೆ, ‘ನನ್ನ ಮಟ್ಟದಲ್ಲಿ ಆ ಪ್ರಯತ್ನ ಸಾಧ್ಯವಿಲ್ಲ. ಪಕ್ಷದ ಉನ್ನತ ನಾಯಕರ ಮಟ್ಟದಲ್ಲಿ ಮಾತ್ರ ಇದು ಸಾಧ್ಯ’ ಎಂದು ಉತ್ತರಿಸಿದರು.

ADVERTISEMENT

‘ನನ್ನ ಹಾಗೂ ಬಿಜೆಪಿ ಪಕ್ಷದ ಮುಖಂಡರ ವಿರುದ್ಧ ಬೇಳೂರು ಸೇರಿ ಕೆಲವರು ಅಸಾಂವಿಧಾನಿಕ ಪದ ಬಳಸಿ ನಿಂದಿಸಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಇಂತಹ ಭಾಷೆ ಬಳಸುವುದು ಅವರ ಸಂಸ್ಕೃತಿ ಏನು ಎಂಬುದು ತೋರಿಸುತ್ತದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ನಾನು ಸಿದ್ಧನಿದ್ದೇನೆ’ ಎಂದರು.

‘ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಬಗ್ಗೆ ಮೃದು ಧೋರಣೆ ಹೊಂದಿದ್ದೇನೆ ಎಂಬುದು ಸರಿಯಲ್ಲ. ನಾನು ಯಾವುದೇ ರಾಜಕೀಯ ನಾಯಕರ ಬಗ್ಗೆ ವಿನಾ ಕಾರಣ ಟೀಕೆ ಮಾಡುವುದಿಲ್ಲ. ವಿಷಯಾಧಾರಿತವಾಗಿ ಟೀಕೆ ಮಾಡುತ್ತೇನೆ. ಕಾಗೋಡು ತಿಮ್ಮಪ್ಪ ಅವರನ್ನು ಟೀಕಿಸಲು ಸಾಕಷ್ಟು ವಿಷಯಗಳಿವೆ. ಮುಂದಿನ ದಿನಗಳಲ್ಲಿ ಅದು ಗೊತ್ತಾಗುತ್ತದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್ ಮೇಸ್ತ್ರಿ, ಹೊಸನಗರ ಘಟಕದ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ, ಬಿಜೆಪಿಯ ಪ್ರಮುಖರುಗಳಾದ ಟಿ.ಡಿ.ಮೇಘರಾಜ್, ವಿ.ಮಹೇಶ್, ಕೆ.ಆರ್.ಗಣೇಶ್‌ಪ್ರಸಾದ್, ಚೇತನ್‌ರಾಜ್ ಕಣ್ಣೂರು ಇದ್ದರು.

ಹಾಲಪ್ಪ ಅವರಿಗಿಂತ ಅವರ ಪತ್ನಿಯೇ ಸಿರಿವಂತೆ

ಹಾಲಪ್ಪ ಘೋಷಿಸಿರುವಂತೆ ಅವರ ಒಟ್ಟು ಆಸ್ತಿ ₹ 1 ಕೋಟಿ 12 ಲಕ್ಷದ 90 ಸಾವಿರ. ಅವರ ಪತ್ನಿಯ ಆಸ್ತಿ ₹ 2 ಕೋಟಿ 54 ಲಕ್ಷದ 62 ಸಾವಿರ ಇದೆ. ಹರತಾಳು ಹಾಲಪ್ಪ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿಯ ವಿವರಗಳ ಪ್ರಕಾರ ಅವರ ಕೈಯಲ್ಲಿ ನಗದು ₹ 15 ಲಕ್ಷವಿದ್ದರೆ, ಪತ್ನಿ ಕೈಯಲ್ಲಿ ₹ 3.5 ಲಕ್ಷ, ಮಗನ ಬಳಿ ₹ 50 ಸಾವಿರ ಇದೆ.

ವಿವಿಧ ಬ್ಯಾಂಕ್‌ಗಳಲ್ಲಿ ಹಾಲಪ್ಪ ಅವರ ಹೆಸರಿನಲ್ಲಿ ₹ 1,90, 152 ಇದ್ದರೆ, ಅವರ ಪತ್ನಿಯ ಹೆಸರಿನಲ್ಲಿ ₹ 9,01543 ಠೇವಣಿ ಇದೆ. ಹಾಲಪ್ಪ ಅವರ ಬಳಿ 200 ಗ್ರಾಂ ಚಿನ್ನ ಇದ್ದರೆ, ಅವರ ಪತ್ನಿ ಬಳಿ 1180 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಇದೆ. ಹಾಲಪ್ಪ ಚರಾಸ್ತಿಯ ಮೌಲ್ಯ ₹ 35,90,861 ಆಗಿದೆ. ಅವರ ಪತ್ನಿ ಹೆಸರಿನ ಚರಾಸ್ತಿಯ ಮೌಲ್ಯ ₹ 7412636 ಆಗಿರುತ್ತದೆ.

ಒಂದು ಫಾರ್ಚುನರ್ ವಾಹನವಿದ್ದರೆ, ಅವರ ಪತ್ನಿಯ ಹೆಸರಿನಲ್ಲಿ ಒಂದು ಸ್ಕಾರ್ಪಿಯೊ ವಾಹನ ಇದೆ. ಹಾಲಪ್ಪ ಅವರ ಹೆಸರಿನಲ್ಲಿ₹ 62 ಲಕ್ಷ, ಪತ್ನಿಯ ಹೆಸರಿನಲ್ಲಿ ₹ 1.77 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.