ADVERTISEMENT

ಬಂಜಾರ ಸಂಸ್ಕೃತಿ ಉಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:55 IST
Last Updated 16 ಅಕ್ಟೋಬರ್ 2012, 9:55 IST
ಬಂಜಾರ ಸಂಸ್ಕೃತಿ ಉಳಿಸಲು ಸಲಹೆ
ಬಂಜಾರ ಸಂಸ್ಕೃತಿ ಉಳಿಸಲು ಸಲಹೆ   

ಶಿವಮೊಗ್ಗ: ದೇವಸ್ಥಾನಗಳನ್ನು ಕಟ್ಟಬಹುದು; ಆದರೆ, ಸಂಸ್ಕೃತಿ ನಾಶವಾದರೆ ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ, ಉತ್ಕೃಷ್ಟ ಬಂಜಾರ ಸಂಸ್ಕೃತಿ ಉಳಿಸಿ ಎಂದು ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯ್ಕ ಹೇಳಿದರು.

ತಾಲ್ಲೂಕಿನ ಸಂತೆಕಡೂರು ಗ್ರಾಮದಲ್ಲಿ ಸೋಮವಾರ ದುರ್ಗಮ್ಮ ಸೇವಾಲಾಲ್ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ತಾಂಡಾದ ಜನತೆಗೆ ನ್ಯಾಯಾಲಯದ ಮೆಟ್ಟಿಲು ಏರಿ ಗೊತ್ತಿರಲಿಲ್ಲ. ತಾಂಡದಲ್ಲಿ ನಾಯಕ್, ಡಾವ್ ಮತ್ತು ಖಾರಬಾರಿ ಎಂಬ ಮುಖಂಡರು ನ್ಯಾಯ ಒದಗಿಸುತ್ತಿದ್ದರು. ಈಗ ಅದು ಮಾಯಾವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿಯೇ ರಾಜ್ಯ ಪ್ರಥಮವಾಗಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ರಾಜ್ಯದಲ್ಲಿ ಸುಮಾರು 25ರಿಂದ 30 ಲಕ್ಷ ಲಂಬಾಣಿ ಜನರಿದ್ದಾರೆ. ಸುಮಾರು 5 ಸಾವಿರ ತಾಂಡಾಗಳನ್ನು ಗುರುತಿಸಲಾಗಿದೆ. ತಾಂಡಾ ಅಭಿವೃದ್ಧಿಗಾಗಿ ಸರ್ಕಾರ ನಿಗಮಕ್ಕೆ ರೂ 150 ಕೋಟಿ ಹಣ ನೀಡಿದೆ. ರಾಜ್ಯದಲ್ಲಿ 1,500 ಸಮುದಾಯ ಭವನ ನಿರ್ಮಿಸುವ ಪ್ರಕ್ರಿಯೆ ನಡೆದಿದೆ. ಪ್ರತಿ ತಾಂಡಾವನ್ನು ಕಂದಾಯ ಗ್ರಾಮ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.

ಸರ್ಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಬಂಜಾರರಿಗೆ ಅರಿವು ಇಲ್ಲ. ಈ ಬಗ್ಗೆ ಅರಿವು ಮೂಡಿಸಲು 5 ಸಾವಿರ ತಾಂಡಾಗಳಲ್ಲಿ ಪ್ರತಿ ತಾಂಡಾದ 10ಜನ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣ ಮಾತನಾಡಿ, ಹಿಂದುಳಿದ ಸಮುದಾಯಗಳು ಮೊದಲು ಕೀಳರಿಮೆಯಿಂದ ಹೊರಬರಬೇಕು.

ಇದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಲಹೆ ನೀಡಿದರು. ಟಾಕ್ರಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಬೋಜ್ಯಾನಾಯ್ಕ, ಮುಖಂಡ ಶ್ರಿನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT