ADVERTISEMENT

ಬಂದ್ಯಾ, ಯಮರವಳ್ಳಿಯಲ್ಲೂ ಪ್ರಾಚೀನ ನಿಲುಸುಗಲ್ಲು ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 5:12 IST
Last Updated 1 ಡಿಸೆಂಬರ್ 2017, 5:12 IST
ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾ.ಪಂ ವ್ಯಾಪ್ತಿಯ ಬಂದ್ಯಾ ಹಾಗೂ ಯಮರವಳ್ಳಿ ಗ್ರಾಮದಲ್ಲಿ ಪತ್ತೆಯಾದ ಪ್ರಾಚೀನ ಕಾಲದ ಬೃಹತ್‌ ನಿಲ್ಲಿಸುಗಲ್ಲುಗಳು.
ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾ.ಪಂ ವ್ಯಾಪ್ತಿಯ ಬಂದ್ಯಾ ಹಾಗೂ ಯಮರವಳ್ಳಿ ಗ್ರಾಮದಲ್ಲಿ ಪತ್ತೆಯಾದ ಪ್ರಾಚೀನ ಕಾಲದ ಬೃಹತ್‌ ನಿಲ್ಲಿಸುಗಲ್ಲುಗಳು.   

ತೀರ್ಥಹಳ್ಳಿ: ತಾಲ್ಲೂಕಿನ ಅರಳಸುರಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂದ್ಯಾ ಹಾಗೂ ಯಮರವಳ್ಳಿ ಗ್ರಾಮದಲ್ಲಿ ಪ್ರಾಚೀನ ಕಾಲದ ಬೃಹತ್‌ ನಿಲ್ಲಿಸುಗಲ್ಲುಗಳು ಪತ್ತೆಯಾಗಿವೆ. ಶರಾವತಿ ನದಿ ಉಗಮ ಅಂಬುತೀರ್ಥದಿಂದ 2 ಕಿ.ಮೀ. ದೂರದಲ್ಲಿ ನಿಲುಸುಗಲ್ಲುಗಳು ಪತ್ತೆಯಾಗಿದೆ. ಈಗಾಗಲೇ ಈ ಭಾಗದ ನೊಣಬೂರು, ಬೊಂಬಳಿಗೆ, ತಟ್ಟೇಕೇವಿ ಪ್ರದೇಶದಲ್ಲೂ ಇಂಥ ನಿಲುಸುಗಲ್ಲುಗಳು ಕಂಡು ಬಂದಿದ್ದವು. ಈಗ ಯಮರವಳ್ಳಿ ಗ್ರಾಮ ಇದಕ್ಕೆ ಹೊಸ ಸೇರ್ಪಡೆಯಾಗಿದೆ.

ಯಮರವಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ನೆಡು ತೋಪಿನಲ್ಲಿ ಪತ್ತೆಯಾದ 12 ಅಡಿ ಎತ್ತರದ ನಿಲುಸುಗಲ್ಲು ಸಮೀಪ 8 ಶಿಲಾಗೋರಿಗಳು ಕಂಡು ಬಂದಿವೆ. ಸ್ಥಳೀಯರು ನಿಲುಸುಗಲ್ಲು ಹಾಗೂ ಶಿಲಾಗೋರಿಗಳನ್ನು ಪೂಜಿಸುತ್ತಿದ್ದಾರೆ.

ಅರಳಸುರಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂದ್ಯಾ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿ ಮತ್ತೊಂದು ಶಿಲಾಯುಗ ಕಾಲದ ನಿಲುಸುಗಲ್ಲು ಕಂಡು ಬಂದಿದೆ. ಇದು 8 ಅಡಿ ಎತ್ತರವಿದ್ದು, ಸುತ್ತಲೂ ಏಳು ದೊಡ್ಡ ಕಲ್ಲುಗಳು ಕಂಡು ಬಂದಿದೆ. ಇವುಗಳಿಗೂ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.

ADVERTISEMENT

‘ಈ ಭಾಗದಲ್ಲಿ ಪ್ರಾಚೀನ ಕಾಲದ ನಿಲುಸುಗಲ್ಲುಗಳು ಕಂಡು ಬಂದಿರುವುದರಿಂದ ಸಂಶೋಧಕರಿಗೆ ಮತ್ತಷ್ಟು ಮಾಹಿತಿ ಸಿಕ್ಕಂತಾಗಿದೆ’ ಎಂದು ಎಂದು ಸಂಶೋಧಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಪ್ರೊ. ಜಿ.ಕೆ.ದೇವರಾಜಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಈ ಸಂಶೋಧನೆಯಲ್ಲಿ ಪತ್ರಕರ್ತ ಜಿ.ಆರ್‌.ಸತ್ಯನಾರಾಯಣ, ಇತಿಹಾಸ ಅಕಾಡೆಮಿ ಸದಸ್ಯ ಎಲ್‌.ಎಸ್‌.ರಾಘವೇಂದ್ರ ಮತ್ತು ಸೂರತ್‌ ಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.