ADVERTISEMENT

ಬಡವರ ಮನೆ ಬಾಗಿಲಿಗೆ ತಜ್ಞ ವೈದ್ಯರು

ನಕ್ಸಲ್‌ ಪೀಡಿತ ಗ್ರಾಮದಲ್ಲಿ ವೈದ್ಯಕೀಯ ಶಿಬಿರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 6:15 IST
Last Updated 14 ಡಿಸೆಂಬರ್ 2013, 6:15 IST

ಹೊಸನಗರ: ಕುಗ್ರಾಮದ ಬಡವರ ಮನೆ ಬಾಗಿಲಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಒಂದು ಉತ್ತಮ ಯೋಜನೆ ಆಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಹೇಳಿದರು. 

   ತಾಲ್ಲೂಕಿನ ಸಂಪೆಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಕ್ಸಲ್‌ ಪೀಡಿತ ಮತ್ತಕೈ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ಷಣಾ ಇಲಾಖೆ  ಆಶ್ರಯದಲ್ಲಿ ಶುಕ್ರವಾರ ಉಚಿತ ತಜ್ಞ ವೈದ್ಯಕೀಯ ಶಿಬಿರದಲ್ಲಿ ಅವರು ಮಾತನಾಡಿದರು.

  ನಕ್ಸಲ್ ಪೀಡಿತ ಯಡೂರು, ಸುಳಗೋಡು ಮಾಸ್ತಿಕಟ್ಟೆ ಹಾಗೂ ನಿಟ್ಟೂರು ಗ್ರಾಮ ಪಂಚಾಯ್ತಿಗಳಲ್ಲಿ ಉಚಿತ ತಜ್ಞ ವೈದ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.     ಆರೋಗ್ಯ ಶಿಬಿರದಲ್ಲಿ ದಂತ, ಕಿವಿ, ಮೂಗು, ಗಂಟಲು, ಕಣ್ಣು, ಚರ್ಮ, ಲೈಂಗಿಕ, ಸ್ತ್ರೀ ರೋಗ, ಪ್ರಸೂತಿ ತಜ್ಞ, ಆರ್ಯುವೇದ ವಿಭಾಗದಲ್ಲಿ ಶಿವಮೊಗ್ಗ ವೈದ್ಯಕೀಯ ಮಹಾ ವಿದ್ಯಾಲಯದ ನುರಿತ ವೈದ್ಯರಿಂದ ಆರೋಗ್ಯ ಸೇವಾ ಚಿಕಿತ್ಸೆ ನೀಡಲಾಯಿತು.

ಶಿಬಿರದಲ್ಲಿ ಸುಮಾರು 187 ಗ್ರಾಮಸ್ಥರನ್ನುತಪಾಸಣೆ ಮಾಡಿದ್ದು, 100 ಮಂದಿಗೆ ರಕ್ತ ತಪಾಸಣೆ, 150 ಜನರಿಗೆ ಉಚಿತ ಮಾತ್ರೆ, ಔಷಧಿ, ಟಾನಿಕ್ ವಿತರಣೆ ಹಾಗೂ 10 ಜನರಿಗೆ ಇಸಿಜಿ ಮಾಡಲಾಯಿತು ಎಂದರು. ವೈದ್ಯಕೀಯ ತಂಡದಲ್ಲಿ ಶಿಬಿರಾಧಿಕಾರಿ ಡಾ.ಸೆಂದಿಲ್‌ ಕುಮಾರ್, ಡಾ.ಗೀತಾ, ಡಾ.ನಾಗರಾಜ್, ಡಾ.ರಾಜು, ಡಾ.ಮಲ್ಲಿಕಾರ್ಜುನ್, ಡಾ.ಮಂಜುನಾಥ್ ಪ್ರಸಾದ್ ಹಾಗೂ ಆರ್ಯವೇದ ವೈದ್ಯೆ ಡಾ.ಗೀತಾ ಪಾಲ್ಗೊಂಡಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.