ADVERTISEMENT

ಬಹುಗ್ರಾಮ ಕುಡಿಯುವ ಯೋಜನೆಗೆ ಬಾಲಗ್ರಹ

ಪ್ರಕಾಶ ಕುಗ್ವೆ
Published 14 ಮಾರ್ಚ್ 2012, 5:55 IST
Last Updated 14 ಮಾರ್ಚ್ 2012, 5:55 IST

ಶಿವಮೊಗ್ಗ: `ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ~ ಎಂಬ ಗಾದೆಯನ್ನು ಜಿಲ್ಲೆ ಮಟ್ಟಿಗೆ `ನದಿಯ ನೆಂಟಸ್ತನ, ನೀರಿಗೆ ಬಡತನ~ ಹೀಗೆ ಬದಲಾಯಿಸಬೇಕಿದೆ. ತುಂಗಾ-ಭದ್ರಾ, ಶರಾವತಿ, ಕುಮದ್ವತಿ ಸೇರಿದಂತೆ ಸಾಕಷ್ಟು ನದಿಗಳು, ಹಳ್ಳ-ಕೊಳ್ಳಗಳು ಹರಿದಾಡಿದರೂ ಮಲೆನಾಡಿನಲ್ಲಿ ಕುಡಿಯುವ ನೀರಿನ ತತ್ವಾರ ತಪ್ಪಿಲ್ಲ.

ಸರಿಸುಮಾರು 342 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ ಕುಂಟುತ್ತ, ಕುರುಡುತ್ತ ಸಾಗಿದೆ. ನದಿ, ಹಳ್ಳ-ಕೊಳ್ಳಗಳ ನೀರಿನ ಮೂಲ ಬಳಸಿಕೊಂಡು ದೊಡ್ಡ ಟ್ಯಾಂಕ್ ಕಟ್ಟಿ ಅದರಿಂದ ಹತ್ತಿರದ ಹತ್ತಾರು ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವುದು ಯೋಜನೆ ಉದ್ದೇಶ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಕುಡಿಯುವ ನೀರು ಒದಗಿಸಲು ಸಾಧ್ಯ ಇರುವ ನೀರಿನ ಮೂಲಗಳನ್ನೂ ಗುರುತಿಸಿ ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವಿಭಾಗ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಸೊರಬ ತಾಲ್ಲೂಕಿನಲ್ಲಿ ಸೇರಿದಂತೆ ಒಟ್ಟು 18 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿಗೆ ಇಲಾಖೆ, 2006ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

ಬೆಂಗಳೂರಿನಲ್ಲಿರುವ ರಾಜ್ಯಮಟ್ಟದ ಯೋಜನೆ ಆಯ್ಕೆ ಸಮಿತಿ ಇದುವರೆಗೂ ಕೇವಲ 5 ಯೋಜನೆಗಳಿಗೆ ಮಂಜೂರಾತಿ ನೀಡಿದೆ. 2006-07ರಲ್ಲಿ ಮೂರು ಯೋಜನೆಗಳಿಗೆ ಮಂಜೂರಾತಿ ನೀಡಿದ್ದರೆ, 2010-11ರಲ್ಲಿ ಕೇವಲ ಎರಡು ಯೋಜನೆಗಳಿಗೆ ಮಂಜೂರಾತಿ ನೀಡಿದೆ. 13 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಮಿತಿ ಇದುವರೆಗೂ ಗ್ರೀನ್‌ಸಿಗ್ನಲ್ ನೀಡಿಲ್ಲ.

ಅದರಂತೆ ್ಙ 6.61 ಕೋಟಿ ವೆಚ್ಚದಲ್ಲಿ ಭದ್ರಾವತಿ ತಾಲ್ಲೂಕಿನ ಹಿರಿಯೂರು ಕಂಬದಾಳ್ ಹೊಸೂರು ಮತ್ತು ಸಿಂಗನಮನೆ ವ್ಯಾಪ್ತಿಯ 21 ಗ್ರಾಮಗಳಿಗೆ, ಇದೇ ತಾಲ್ಲೂಕಿನ ಬಿಳಕಿ ಮತ್ತು ಇತರೆ 3 ಗ್ರಾಮಗಳಿಗೆ ರೂ 3.32 ಕೋಟಿ ವೆಚ್ಚದಲ್ಲಿ, ಭದ್ರಾವತಿಯ ಬಾರಂದೂರು ಮತ್ತು ಇತರೆ 8 ಗ್ರಾಮಗಳಿಗೆ ರೂ5.51 ಕೋಟಿ  ವೆಚ್ಚದಲ್ಲಿ, ಶಾಶ್ವತ ನೀರು ಒದಗಿಸುವ ಯೋಜನೆಯನ್ನು ಮಂಜೂರು ಮಾಡಿದೆ.
 
ಈಗ ಈ ಮೂರು ಯೋಜನೆಗಳ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಟ್ರಯಲ್ ರನ್ನಿಂಗ್ ನಡೆಸಲಾಗುತ್ತಿದೆ.
2010-11ರಲ್ಲಿ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಮತ್ತು ಇತರೆ 18 ಗ್ರಾಮಗಳಲ್ಲಿ, ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವ್ಯಾಪ್ತಿಯ 14 ಗ್ರಾಮಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅಸ್ತು ಎಂದಿದೆ. ಅದರಂತೆ ಮಂಡಗದ್ದೆ ವ್ಯಾಪ್ತಿಯಲ್ಲಿ ಜಾಕ್‌ವೆಲ್, ಏರಿಯೇಟರ್, ರಾ ವಾಟರ್ ಟ್ಯಾಂಕ್, ಸೆಡಿಮೆಂಟೆಷನ್ ಟ್ಯಾಂಕ್, ಪ್ಯೂರಿಪಿಕೇಷನ್ ಟ್ಯಾಂಕ್ ಪ್ರಗತಿಯಲ್ಲಿದೆ. ರೂ 8.40 ಕೋಟಿ ವೆಚ್ಚದ ಕೂಡ್ಲಿಗೆರೆ ಯೋಜನೆಗೆ ಇಲಾಖೆಯ ಅನುಮೋದನೆ ಕೋರಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರ ಶೀಘ್ರ ಒಪ್ಪಿಗೆ ಸೂಚಿಸಬೇಕೆಂದು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಈ ಯೋಜನೆಗಳಿಗೆ ಶೀಘ್ರ ಮಂಜೂರಾತಿ ದೊರೆಕಿಸಿಕೊಡುವ ಸಂಬಂಧ ಪಂಚಾಯತ್ ರಾಜ್ಯ ಖಾತೆ ಸಚಿವರೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.

ಮಂಜೂರಾತಿ ನಿರೀಕ್ಷೆಯಲ್ಲಿ... 
ಈ ಕೆಳಗಿನ 13 ಬಹುಗ್ರಾಮ ಕುಡಿಯುವ ಯೋಜನೆಗಳು ಸರ್ಕಾರದ ಮಂಜೂರಾತಿಗೆ ಕಾದು ಕುಳಿತಿವೆ. 
ರೂ 9.50ಕೋಟಿ ವೆಚ್ಚದಲ್ಲಿ ಶಿವಮೊಗ್ಗ ತಾಲ್ಲೂಕಿನ ಸಂತೆಕಡೂರು, ನಿದಿಗೆ ಗ್ರಾ.ಪಂ. ವ್ಯಾಪ್ತಿಯ 18 ಗ್ರಾಮಗಳಲ್ಲಿ, ರೂ 7.25 ಕೋಟಿ ವೆಚ್ಚದಲ್ಲಿ ಕಸಬಾ ಹೋಬಳಿ ಗಾಜನೂರು ಮತ್ತು ಹೊಸಳ್ಳಿ ವ್ಯಾಪ್ತಿಯ 12 ಗ್ರಾಮಗಳಲ್ಲಿ, ರೂ 7.87 ಕೋಟಿ ವೆಚ್ಚದಲ್ಲಿ ಹೊಳೆಬೆನವನಹಳ್ಳಿ, ಪಿಳ್ಳಂಗೆರೆ, ಬೀರನಹಳ್ಳಿ ಸೇರಿದಂತೆ 20 ಗ್ರಾಮಗಳಲ್ಲಿ,ರೂ1.56 ಕೋಟಿ ವೆಚ್ಚದಲ್ಲಿ ಹೊಳಲೂರು ಹೋಬಳಿಯ ಬುಳ್ಳಾಪುರ ಸೇರಿದಂತೆ 24 ಗ್ರಾಮಗಳಲ್ಲಿ, ರೂ40.50 ಕೋಟಿ ವೆಚ್ಚದಲ್ಲಿ ಕುಂಸಿ ಮತ್ತ ಹಾರ‌್ನಹಳ್ಳಿಯ ಹೋಬಳಿ ವ್ಯಾಪ್ತಿಯ 56 ಗ್ರಾಮಗಳಲ್ಲಿ, ರೂ9.80ಕೋಟಿ ವೆಚ್ಚದಲ್ಲಿ ಹಸೂಡಿ ಮತ್ತು ನಿದಿಗೆ ಹೋಬಳಿಯ 12 ಗ್ರಾಮಗಳಲ್ಲಿ,ರೂ9.63ಕೋಟಿ  ವೆಚ್ಚದಲ್ಲಿ ನಿದಿಗೆ ಹೋಬಳಿಯ ಉಂಬ್ಳೇಬೈಲು ಮತ್ತು ಕೋರಲಹಳ್ಳಿ ಸೇರಿದಂತೆ 23 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹಾಗೆಯೇ, ರೂ 6 ಕೋಟಿ ವೆಚ್ಚದಲ್ಲಿ ಭದ್ರಾವತಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಸೇರಿದಂತೆ 16 ಗ್ರಾಮಗಳಲ್ಲಿ, ರೂ3.85 ಕೋಟಿ ವೆಚ್ಚದಲ್ಲಿ ಯಡೇಹಳ್ಳಿ ಸೇರಿದಂತೆ ಏಳು ಗ್ರಾಮಗಳಲ್ಲಿ, ರೂ8.05 ಕೋಟಿ ವೆಚ್ಚದಲ್ಲಿ ಅಂತರಗಂಗೆ ಸೇರಿದಂತೆ 22 ಗ್ರಾಮಗಳಲ್ಲಿ ಹಾಗೆಯೇ ರೂ 4.52 ಕೋಟಿ  ವೆಚ್ಚದಲ್ಲಿ ಕಲ್ಲಹಳ್ಳಿ ಸೇರಿದಂತೆ 4 ಗ್ರಾಮಗಳಲ್ಲಿ ಈ ಯೋಜನೆಗೆ ಪ್ರಸ್ತಾವ ಇಲಾಖೆಯಿಂದ ಸರ್ಕಾರಕ್ಕೆ ಹೋಗಿದೆ.

ಅಲ್ಲದೇ, ರೂ 8.21 ಕೋಟಿ ವೆಚ್ಚದಲ್ಲಿ ಆನವಟ್ಟಿ ಹೋಬಳಿಯ 13 ಗ್ರಾಮಗಳಲ್ಲಿ ಮತ್ತು ರೂ 9.40ಕೋಟಿ  ವೆಚ್ಚದಲ್ಲಿ ಮೂಡಿ ದೊಡ್ಡಿಕೊಪ್ಪ ಸೇರಿದಂತೆ ಆನವಟ್ಟಿ ಹೋಬಳಿಯ 14 ಗ್ರಾಮ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕಿನ 3 ಗ್ರಾಮಗಳು ಈ ಯೋಜನೆ ವ್ಯಾಪ್ತಿಯಲ್ಲಿವೆ ಎಂದು ಪಂಚಾಯತ್ ರಜ್ ಕಾರ್ಯಪಾಲಕ ಎಂಜಿನಿಯರ್ ಹನುಮಂತಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.