ADVERTISEMENT

ಬಿಎಸ್‌ವೈ ಬಂಧನ ಹಿನ್ನೆಲೆ: ಅಭಿಮಾನಿಗಳಿಂದ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 10:25 IST
Last Updated 20 ಅಕ್ಟೋಬರ್ 2011, 10:25 IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಶೀಘ್ರ ಬಂಧಮುಕ್ತಕ್ಕೆ ಅಭಿಮಾನಿಗಳ ಹೆಸರಿನಲ್ಲಿ ಬುಧವಾರ ಕೆಲವರು ಕರೆ ನೀಡಿದ್ದ ಶಿವಮೊಗ್ಗ ನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆ ಕೆಲವರು ಬಂದು ಬಲವಂತಾಗಿ ಅಂಗಡಿ- ಮುಂಗಟ್ಟುಗಳ ಬಾಗಿಲು ಮುಚ್ಚಲು ಹೇಳಿದರು ಎಂದು ವಿನೋಬನಗರ ಸುತ್ತಮುತ್ತಲಿನ ಭಾಗದ ಅಂಗಡಿ ಮಾಲೀಕರು ದೂರಿದರು.

ಸಹಜ ಜನಜೀವನ

ನಗರದ ಕೆಲವು ಭಾಗಗಳಲ್ಲಿ ಅಂಗಡಿಗಳು ಬಂದ್ ಆಗಿದ್ದು ಬಿಟ್ಟರೆ, ಉಳಿದ ಭಾಗಗಳಲ್ಲಿ ಜನಜೀವನ ಸಹಜವಾಗಿತ್ತು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು.

ನಗರ ಸಾರಿಗೆ ಬಸ್‌ಗಳು ಮುಂಜಾನೆ ಕೆಲಕಾಲ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಯಿತು.

ವಿನೋಬನಗರ ಸುತ್ತಮುತ್ತಲಿನ ಪ್ರದೇಶಗಳು, ಗಾಂಧಿ ಬಜಾರ್,  ನೆಹರು ರಸ್ತೆ, ಶಿವಪ್ಪನಾಯಕ ವೃತ್ತ, ಅಮಿರ್ ಅಹಮದ್ ವೃತ್ತದಲ್ಲಿನ ಕೆಲ ಅಂಗಡಿ- ಮುಂಗಟ್ಟುಗಳು ಮಧ್ಯಾಹ್ನದವರೆಗೆ ಮುಚ್ಚಿದ್ದವು.
ಆದರೆ, ಬಿ.ಎಚ್. ರಸ್ತೆ, ಎನ್.ಟಿ. ರಸ್ತೆ, ಗೋಪಿ ವೃತ್ತಗಳಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟುಗಳು ಬಾಗಿಲು ತೆಗೆದಿದ್ದು, ಜನಸಂದಣಿ ಎಂದಿನಂತೆ ಇತ್ತು.

ಚಿತ್ರ ಪ್ರದರ್ಶನ ಬಂದ್
ಕೆಲವು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಎಂದಿನಂತೆಯೇ ತರಗತಿ ನಡೆಸಿದವು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಂದಿನಂತೆ ಚಟುವಟಿಕೆ ನಡೆದರೆ,  ಕೆಲವು ಚಿತ್ರ ಮಂದಿರಗಳು ಮಧ್ಯಾಹ್ನದವರೆಗೆ ಚಿತ್ರ ಪ್ರದರ್ಶನ ಬಂದ್ ಮಾಡಿದ್ದವು.

ಬಂದ್‌ಗೆ ತಾಕೀತು
ಯಡಿಯೂರಪ್ಪ ಅವರ ಅಭಿಮಾನಿಗಳ ಹೆಸರಲ್ಲಿ ಕೆಲವರು ಮಂಗಳವಾರ ರಾತ್ರಿಯೇ ಅಂಗಡಿ ಬಳಿ, ಬುಧವಾರ ಬಂದ್ ಮಾಡಬೇಕೆಂದು ತಾಕೀತು ಮಾಡಿದ್ದರು.

ಇದಕ್ಕೆ ಅಲ್ಲಿದ್ದ ಪೊಲೀಸರೂ ಕೂಡಾ ಸಾಥ್ ನೀಡಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ವಿನೋಬ ನಗರದ ಬಟ್ಟೆ ಅಂಗಡಿ ಮಾಲೀಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.