ADVERTISEMENT

ಬೊಗ ಸೆ ಬತ್ತ ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 7:35 IST
Last Updated 13 ಜನವರಿ 2012, 7:35 IST

ಹೊಸನಗರ: ತಾಲ್ಲೂಕಿನಲ್ಲಿ ಬೆಂಬಲ ಬೆಲೆಯ ಬತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ರೈತರು ತಾಲ್ಲೂಕು ಕಚೇರಿ ಎದುರು ಬೊಗಸೆ ಬತ್ತ ಸುರಿದು ಪ್ರತಿಭಟನೆ ಗುರುವಾರ ನಡೆಸಿದರು.

ರಾಜ್ಯ ರೈತ ಸಂಘ, ಹೊಸನಗರ ತಾಲ್ಲೂಕು ರೈತ ಒಕ್ಕೂಟ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಹೋಬಳಿಮಟ್ಟದಲ್ಲಿ ಸರ್ಕಾರವು ಬೆಂಬಲ ಬೆಲೆ ಬತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ರೈತ ಒಕ್ಕೂಟದ ಅಧ್ಯಕ್ಷ ಡಿ.ಕೆ. ಹರಿಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯ ಪ್ರಕಾರ 13 ಸಾವಿರ ಹೆಕ್ಟೇರ್ ಬತ್ತ ಕೃಷಿ ಭೂಮಿ ಇದೆ. ಆದರೆ, ಬೆಂಬಲ ಬೆಲೆ ಬತ್ತ ಖರೀದಿ ಕೇಂದ್ರ ಮಾತ್ರ ಒಂದೂ ಇಲ್ಲ ಎಂದು ದೂರಿದರು.

ಸರ್ಕಾರಿ ಲೆಕ್ಕದಲ್ಲಿ ಸಾಕಷ್ಟು ಬತ್ತ ಕೃಷಿ ಭೂಮಿ ಇದ್ದಾಗ್ಯೂ, ಹೊಸನಗರ ತಾಲ್ಲೂಕಿನಲ್ಲಿ ಬತ್ತ ಆವಕದ ಪ್ರಮಾಣ ಕಡಿಮೆ ಇದೆ ಎಂಬ ಜಿಲ್ಲಾಧಿಕಾರಿ ತಪ್ಪು ಧೋರಣೆಯ ನಿರ್ಧಾರದ ಕಾರಣದಿಂದಾಗಿ ರೈತ ಸಂಘಟನೆಗಳ ಅಹವಾಲುಗಳಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.

ಇದರಿಂದಾಗಿ ಖಾಸಗಿ ಬತ್ತ ವ್ಯಾಪಾರಿಗಳು ಹಾಗೂ ಮಿಲ್ ಮಾಲೀಕರು ಕ್ವಿಂಟಲ್‌ಗೆ ರೂ.800- 900 ಅಡ್ಡ-ದುಡ್ಡಿಗೆ ಬತ್ತ ಖರೀದಿ ಮಾಡುತ್ತಿರುವುದರಿಂದ ರೈತರು ಸೂಕ್ತ ಬೆಲೆ ಇಲ್ಲದೇ ಸಂಕಷ್ಟ ಪಡುವಂತಾಗಿದೆ ಎಂದರು.

ಸರ್ಕಾರ ನಿಗದಿ ಮಾಡಿದ ಪ್ರತಿ ಕ್ವಿಂಟಲ್‌ಗೆ ರೂ.1,200 ದರದಂತೆ ತಾಲ್ಲೂಕಿನ ಕಸಬಾ, ರಿಪ್ಪನ್‌ಪೇಟೆ ಹಾಗೂ ನಗರ ಹೋಬಳಿಯಲ್ಲಿ ಬೆಂಬಲ ಬೆಲೆ ಬತ್ತ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ವಿಷದ ಬಾಟಲಿಸಹಿತ ರೈತ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಅವರಿಗೆ ನೀಡಿದ ಮನವಿಗೆ ಸ್ಪಂದಿಸಿದ ಅವರು, ತಾಲ್ಲೂಕು ಪಂಚಾಯ್ತಿಯಿಂದ ಈಗಾಗಲೇ ಬತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದ ನಡಾವಳಿ ಮಾಡಲಾಗಿದೆ ಎಂದುತಿಳಿಸಿದರು.


ವಿವಿಧ ಕೃಷಿ ಸಂಘಟನೆ ರೈತ ಮುಖಂಡರಾದ ಗಣೇಶ್ ಬೆಳ್ಳಿ, ರಾಜು ದೇವಾಡಿಗ, ಲಕ್ಷ್ಮಣ ಕಿಡುಗುಂಡಿ, ನಾಗಭೂಷಣ್, ಕುಂಟಿಗೆ ದ್ಯಾವಪ್ಪ ಗೌಡ, ಕೆಬಿ ಸರ್ಕಲ್ ಲಿಂಗಪ್ಪ, ಪ್ರವೀಣ್ ಮುಳುಗುಡ್ಡೆ, ನಿವಣೆ ಸತೀಶ್, ಅಂಬರೀಷ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT