ADVERTISEMENT

ಭರತಖಂಡದ ಕಲೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:56 IST
Last Updated 11 ಡಿಸೆಂಬರ್ 2013, 8:56 IST

ಶಿವಮೊಗ್ಗ:  ಅಲ್ಲಿ ಇಡೀ ಭರತಖಂಡದ ಕಲೆಗಳು ಪ್ರದರ್ಶನಗೊಂಡವು.  ಯಕ್ಷಲೋಕದ ಗಂಧರ್ವರರು ಅವತರಿಸಿದ್ದರು. ಆಂಧ್ರದ ಬಂಜಾರ  ನೃತ್ಯ, ಮಣಿಪುರಿ ದೋಲ್ ಚಲಮ್, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಹಾರಾಷ್ಟ್ರದ ಲಾವಣಿ ನೃತ್ಯ...

ಒಂದೇ ಎರಡೇ? ಎಲ್ಲವೂ ಅದ್ಭುತ. ಇವೆಲ್ಲವನ್ನೂ ವಿದ್ಯಾರ್ಥಿಗಳು ಮಾಡಿದ್ದು ಎನ್ನುವುದು ಮತ್ತೊಂದು ಅದ್ಭುತ.
ದಕ್ಷಿಣ ಕನ್ನಡದ ಮೂಡುಬಿದಿರೆಯ ಡಿಸೆಂಬರ್‌ 19,20, 21 ಮತ್ತು 22ರಂದು ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್–2013 ಅಂಗವಾಗಿ ಜಿಲ್ಲಾ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ ಘಟಕ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಲಾ ರಸಿಕರನ್ನು ರಸದೌತಣದಲ್ಲಿ ಮೈಮರೆಸಿತು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಮಾರು 240 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಶಾಸ್ತ್ರೀಯ ನೃತ್ಯಗಳ ಮೂಲಕ ಕಣ್ಮನ ಸೆಳೆದರು.

ಮೋಹಿನಿಯಾಟ್ಟಂ ‘ಗಣೇಶ ವಂದನ’,  ‘ರಂಜನಿಮಾಲಾ’ ಭರತನಾಟ್ಯ, ಬಡಗು ಯಕ್ಷಪ್ರಯೋಗ, ಹಾಗೂ ಒಡಿಸ್ಸಿಯ ‘ಗೋಟಿಪೂವ’ ಜಾನಪದ ನೃತ್ಯ, ಸಮಕಾಕಿನ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಕೇರಳದ ಸೆಮಿ ಕ್ಲಾಸಿಕ್ ನೃತ್ಯ, ತೆಂಕು ಯಕ್ಷಗಾನ ಪ್ರಯೋಗ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆ ಮುಂತಾದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸಿದರು.

ಸಾಂಸ್ಕೃತಿಕ ಉದ್ಘಾಟಿಸಿದ ಶಾಸಕ ಶಾರದಾ ಪೂರ್‍್ಯಾನಾಯ್ಕ ಮಾತನಾಡಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಸಂಸ್ಕೃತಿ ಬೆಳೆಸುವ ಮಹತ್ವ ಕೆಲಸ ಮಾಡುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಇಂದು ಯುವ ಪೀಳಿಗೆ ದಿಕ್ಕು ಕಾಣದಾಗಿದೆ. ಅವರಿಗೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಪರಿಚಯಿಸುವ, ಸಂಸ್ಕೃತಿಯ ಆತ್ಮಾವಲೋಕನ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದಕ್ಕೆ ದಾರಿ ತೋರುತ್ತಿದೆ ಎಂದು ಪ್ರಶಂಸಿಸಿದರು.

ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ನಮ್ಮನ್ನು ಹೊಸ ಲೋಕಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾಂತ್ರಿಕ ಬದುಕಿನಿಂದ ಒಂದಿಷ್ಟು ಹೊರಬಂದು ಇಂತಹ ಸಾಂಸ್ಕೃತಿಕ ವೈಭವಗಳನ್ನು ಪ್ರತ್ಯಕ್ಷವಾಗಿ ನೋಡುವ ಮೂಲಕ ನಾವು ಮತ್ತೊಮ್ಮೆ ಬದುಕಿನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮುಖ್ಯಸ್ಥ ಡಾ.ಎಂ.ಮೋಹನ್‌ ಆಳ್ವ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮಾತನಾಡಿದರು.

ವೇದಿಕೆಯಲ್ಲಿ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ ಜಿಲ್ಲಾ ಘಟಕದ ಪದಾಧಿಕಾರಿಗಳಾದ  ಕಲೀಂವುಲ್ಲಾ, ಡಾ.ಹಾ.ಮಾ.ನಾಗಾರ್ಜುನ, ಪ್ರೊ.ಬಿ.ಎಸ್‌.ಗವೀಶ್, ಪ್ರೊ.ಬಿ.ಆರ್‌.ರವಿ, ಡಾ.ಸಿ.ಬಿ.ಬೂದನಾಯಕ್‌, ಜಿ.ಆರ್‌.ಲವ, ಡಾ.ಕುಂದನ್‌ ಬಸವರಾಜ್‌, ಡಾ.ಸಯ್ಯದ್‌ ಸನಾವುಲ್ಲಾ, ಪ್ರವೀಣ ಪಟೇಲ್‌, ಕೆ.ಎಚ್‌.ರಾಜು ಮತ್ತಿತರರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಎಸ್‌.ಪಿ.ದಿನೇಶ್‌ ಸ್ವಾಗತಿಸಿದರು. ಪ್ರವೀಣ್‌ ಮಹಿಷಿ  ಕಾರ್ಯಕ್ರಮ ನಿರೂಪಿಸಿದರು. ಡಾ.ಕೆ.ಪ್ರಸನ್ನಕುಮಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.