ADVERTISEMENT

ಭಾವೈಕ್ಯದ ಸಂಗಮ ಶ್ರಾವಣ ಮಾಸ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 10:00 IST
Last Updated 21 ಜುಲೈ 2012, 10:00 IST

ಶಿಕಾರಿಪುರ: ಭಾವೈಕ್ಯದ ಸಂಗಮವಾಗಿ ಶ್ರಾವಣ ಮಾಸ ಸಮಾಜದ ಎಲ್ಲ ಬಂಧೂ, ಬಾಂಧವರನ್ನು ಜಾತಿ, ಮತ ಭೇದವಿಲ್ಲದೇ, ಶ್ರದ್ಧಾ ಭಾವನೆಯಿಂದ ಒಂದೆಡೆ ಸೇರಿಸುತ್ತದೆ ಎಂದು `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ ಹೇಳಿದರು.

ಪಟ್ಟಣದ ವಿನಾಯಕ ನಗರದ ಜಯಮ್ಮ ವೆಂಕಟೇಶ್ ಅವರ ನಿವಾಸದಲ್ಲಿ ಶುಕ್ರವಾರ ಮುರುಘರಾಜೇಂದ್ರ ವಿರಕ್ತ ಮಠ ಹಾಗೂ ವೀರಶೈವ ಸಮಾಜದ ಆಶ್ರಯದಲ್ಲಿ ನಡೆದ `ಶ್ರಾವಣ ಬಂತು; ಅನುಭಾವ ತಂತು~ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ, ನಾವುಗಳು ಹಿಂದಿನ ದಿನಗಳಿಂದಲೂ ಅರಮನೆಗಿಂತ ಗುರುಮನೆ ಪ್ರೀತಿಸಿದ ಜನ. ಆದ್ದರಿಂದ, ಗುರುಗಳ ಬಗ್ಗೆ ಅಪಾರವಾದ ಗೌರವ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಿಡದಿ ನಿತ್ಯಾನಂದ ಅವರಿಂದ ಗುರುಗಳನ್ನೇ ಸಂಶಯ ದೃಷ್ಟಿಯಿಂದ ನೋಡುವ ದಿನ ಬಂದಿದೆ ಎಂದು ವಿಷಾದಿಸಿದರು.

ಅಮೆರಿಕದ್ದು ದೇಹ ಸಂಸ್ಕ್ರತಿ. ನಮ್ಮದು ಆತ್ಮ ಸಂಸ್ಕ್ರತಿ. ಅವರ ಸಂಸ್ಕ್ರತಿ ಹೇಳುವಂತೆ  ಜೀವನ ಕ್ಷಣಿಕ ಮಜಾಮಾಡು ಎಂದರೆ; ನಮ್ಮ ಸಂಸ್ಕ್ರತಿ ಜೀವನ ಕ್ಷಣಿಕ ತ್ಯಾಗ ಮಾಡು ಎನ್ನುತ್ತದೆ. ನಾವು ನಮ್ಮ ಸಂಸ್ಕ್ರತಿಯನ್ನು ಉಳಿಸುವ ಕೆಲಸ ಮಾಡಬೇಕು. ಬಸವಣ್ಣ ಎಂದರೆ ಲಿಂಗಾಯತ, ಕುವೆಂಪು ಒಕ್ಕಲಿಗ, ಕನಕದಾಸ ಕುರುಬ ಎಂಬ ಜಾತಿ ಚೌಕಟ್ಟನ್ನು ಈ ದಾರ್ಶನಿಕರಿಗೆ ಹಾಕದೇ, ಅವರದು ಜಾಗತಿಕ ಚೌಕಟ್ಟು ಎನ್ನುವುದನ್ನು ನಾವು ಅರಿತು ಕೊಳ್ಳಬೇಕು ಎಂದರು.

ಸಮಾಜದಲ್ಲಿ ಅನುಕಂಪ ಪ್ರೀತಿಯಿಂದ ಎಂತಹ ಕಠೋರ ಮನಸ್ಸುಗಳನ್ನೂ ಕರಗಿಸಬಹುದು. ಬಹಿರಂಗ ಸೌಂದರ್ಯಕ್ಕಿಂತ, ಅಂತರಂಗ ಸೌಂದರ್ಯ ಮುಖ್ಯವಾಗುತ್ತದೆ ಎಂದರು.ಜೆಡಿಸ್ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್ ನೆನಪಿನ ಕಾಣಿಕೆ ಬಿಡುಗಡೆ ಮಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಸ್ವಾಮೀಜಿಗಳ ಮಾರ್ಗದರ್ಶನ ಮುಖ್ಯವಾಗುತ್ತದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಆರ್. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

ಶಿವಮೊಗ್ಗ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಸ್ವಾಮೀಜಿ, ಕಾಳೇನಹಳ್ಳಿ ರೇವಣಸಿದ್ಧ ಸ್ವಾಮೀಜಿ, ವಿರಕ್ತಮಠ ಚನ್ನಬಸವ ಸ್ವಾಮೀಜಿ, ಹಿರೇಮಠ ರೇಣುಕಾಚಾರ್ಯ ನೇತೃತ್ವ ವಹಿಸಿದ್ದರು.

ಪ್ರಜಾ ಪರಿಷತ್ ಕಾರ್ಯದರ್ಶಿ ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳಾದ ಚಿದಾನಂದ ಎಸ್. ಮಠದ್, ರುದ್ರಮುನಿ, ಸಾಲೂರು ಕುಮಾರ್, ಮಮತಾ ಬಾಲಚಂದ್ರ, ನಿವೃತ್ತ ಪ್ರಾಂಶುಪಾಲ ಪುಟ್ಟಪ್ಪ ಗೌಡ್ರು, ಜೆಡಿಎಸ್ ಮುಖಂಡರಾದ ಎಸ್.ಎಚ್. ಮಂಜುನಾಥ್, ಆರ್. ಜಯಣ್ಣ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.