ADVERTISEMENT

ಮಠ ಅಭಿವೃದ್ಧಿಗೆ 25ಲಕ್ಷ: ಭರವಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 9:35 IST
Last Updated 15 ಫೆಬ್ರುವರಿ 2011, 9:35 IST


ಚನ್ನಗಿರಿ: ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಠಗಳ ಮಾರ್ಗರ್ದಶನ ಅತ್ಯಾವಶ್ಯಕ. ಮಠಗಳು ಧರ್ಮದ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿವೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸೋಮವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಹಿರೇಮಠದ ನೂತನ ಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಧರ್ಮ ಸಮ್ಮೇಳನದ ನೇತೃತ್ವ ವಹಿಸಿ ಅವರು ಮಾತನಾಡಿದರು.

ವೀರಶೈವ ಧರ್ಮದ ಮಠಗಳು ಧರ್ಮಪ್ರಜ್ಞೆ ಮತ್ತು ಕ್ರಿಯಾಶೀಲ ಬದುಕನ್ನು ರೂಪಿಸಿ ಜನ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ. ಜಾತಿ ಸಂಘರ್ಷದ ಇಂದಿನ ದಿನದಲ್ಲಿ ಧರ್ಮದ ತಳಹದಿಯ ಮೇಲೆ ಕಾರ್ಯ ಮಾಡುವ ಮಠಗಳು ಯಾವಾಗಲೂ ಉಳಿಯುತ್ತವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಅತ್ಯಂತ ಹಿಂದುಳಿದಿರುವ ಈ ಹಿರೇಮಠಕ್ಕೆ ಎಲ್ಲಾ ಸಹಕಾರ ನೀಡಲು ಸಿದ್ಧನಿದ್ದೇನೆ. ಮಠದ ಅಭಿವೃದ್ಧಿಗೆ ಸರ್ಕಾರದಿಂದ ರೂ 25ಲಕ್ಷ ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಕೇದಾರ ಪೀಠದ ಭೀಮಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಮಹಾಂತ ಸ್ವಾಮೀಜಿ, ಯತೀಶ್ವರ ಸ್ವಾಮೀಜಿ, ರೇವಣಸಿದ್ದ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ, ಅಭಿನವ ಸಿದ್ದಲಿಂಗ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಇದ್ದರು.ಈ ಸಂದರ್ಭದಲ್ಲಿ ನೂತನ ಗುರುಗಳಾದ ಶಿವಶಾಂತವೀರ ಸ್ವಾಮೀಜಿಗೆ ರಂಭಾಪುರಿಶ್ರೀ, ಕೇದಾರ ಪೀಠದಶ್ರೀ ಅಧಿಕಾರ ಹಸ್ತಾಂತರಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮ ಪಟೇಲ್, ದಿ. ಜೆ.ಎಚ್. ಪಟೇಲ್‌ರ ಪತ್ನಿ ಸರ್ವಮಂಗಳಮ್ಮ, ತ್ರಿಶೂಲ್ ಪಾಣಿ ಪಟೇಲ್, ಡಾ.ಎ. ಬಸವಣ್ಣಯ್ಯ, ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಭಾರತೀ ಪ್ರಸಾದ್, ಎಲ್.ಎಂ. ರೇಣುಕಾ, ನಾಡಿಗರ್ ಲೋಕೇಶಪ್ಪ, ಪ್ರವೀಣಕುಮಾರ್ ಜೈನ್ ಉಪಸ್ಥಿತರಿದ್ದರು. ಹಾಲಸ್ವಾಮಿ ವಿರಕ್ತ ಮಠದ ಜಯದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಿವಲಿಂಗಯ್ಯ ಸ್ವಾಗತಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಟಿ.ಎಂ.ವಿ. ಓಂಕಾರನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.