ADVERTISEMENT

ಮತದಾರರ ಮರು ನೋಂದಣಿಯ ಸವಾಲು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 9:22 IST
Last Updated 10 ಅಕ್ಟೋಬರ್ 2017, 9:22 IST

ಶಿವಮೊಗ್ಗ: ಶಿಕ್ಷಕ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಗೆ ಹಿಂದೆ ಇದ್ದ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ರದ್ದುಪಡಿಸಿದ್ದು, ನೈರುತ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಚಲಾಯಿಸುವವರು ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವುದು ಅನಿವಾರ್ಯ.

2012ರ ಚುನಾವಣೆಯವರೆಗೂ ಹಿಂದೆಯೇ ಹೆಸರು ನೋಂದಣಿ ಮಾಡಿಕೊಂಡಿದ್ದವರ ಜತೆಗೆ, ಹೊಸ ಮತದಾರರನ್ನೂ ಒಳಗೊಂಡ ಪರಿಷ್ಕೃತ ಪಟ್ಟಿ ತಯಾರಿಸಲಾಗುತ್ತಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಈ ಬಾರಿ ಪ್ರತಿಯೊಬ್ಬ ಪದವೀಧರರು ಹಾಗೂ ಅರ್ಹ ಶಿಕ್ಷಕರು ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.

ಬಿಹಾರದ ಮೇಲ್ಮನೆಗೆ 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮತದಾರರ ಪಟ್ಟಿಯ ಅಕ್ರಮ ಬಯಲಿಗೆ ಬಂದಿತ್ತು. ಈ ವಿಷಯದ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಮೇಲ್ಮನೆ ಹೊಂದಿರುವ ರಾಜ್ಯಗಳಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಹಿಂದೆ ಹೆಸರು ನೋಂದಾಯಿಸಿಕೊಂಡಿದ್ದ ಎಲ್ಲ ಪಟ್ಟಿಯನ್ನೂ ರದ್ದುಗೊಳಿಸಿತ್ತು. ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಹಾಗಾಗಿ, ರಾಜ್ಯದಲ್ಲೂ ಈ ಆದೇಶ ಅನುಷ್ಠಾನ ಮಾಡಲಾಗಿದೆ.

ADVERTISEMENT

ಮತದಾನದ ಗುರುತುಪತ್ರ ಕಡ್ಡಾಯ: ವಿಧಾನಸಭೆ, ಲೋಕಸಭೆಗೆ ಮತ ಚಲಾಯಿಸಲು ಮತದಾನದ ಗುರುತುಪತ್ರ ಕಡ್ಡಾಯ. ಆದರೆ, ಈ ಹಿಂದೆ ವಿಧಾನ ಪರಿಷತ್‌ಗೆ ನಡೆದ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಮತಚಲಾಯಿಸಲು ಗುರುತುಪತ್ರ ಅಗತ್ಯ ಇರಲಿಲ್ಲ. ಈ ಬಾರಿ ಹೆಸರು ನೋಂದಾಯಿಸುವಾಗಲೇ ಅರ್ಜಿಯಲ್ಲಿ ಗುರುತುಪತ್ರದ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು.

ಈ ಹೊಸ ಬೆಳವಣಿಗೆಯ ಪರಿಣಾಮ ಒಂದು ಕ್ಷೇತ್ರದ ಪದವೀಧರರು ಮತ್ತೊಂದು ಕ್ಷೇತ್ರದಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಮಾಡುತ್ತಿದ್ದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಪದವಿ ಪೂರೈಸಿ ಮೂರು ವರ್ಷಗಳಾಗಿದ್ದು, ಆ ಕ್ಷೇತ್ರದಲ್ಲಿ ವಾಸಿಸುವವರಿಗೆ ಮಾತ್ರ ಮತಚಲಾಯಿಸುವ ಅವಕಾಶ ದೊರೆಯಲಿದೆ.

ಅಭ್ಯರ್ಥಿಯ ಸಾಮರ್ಥ್ಯವೇ ಅಳತೆಗೋಲು: ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಅಭ್ಯರ್ಥಿಗಳ ವೈಯಕ್ತಿಕ ಸಾಮರ್ಥ್ಯವೂ ಪ್ರಧಾನವಾಗಿರುತ್ತದೆ. ಆದರೂ, ಪಕ್ಷಗಳ ಬಲಾಬಲ ಪರೋಕ್ಷವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಂಬಲಿತ ಅಭ್ಯರ್ಥಿಯನ್ನೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ.

ಕಾಂಗ್ರೆಸ್ ಈಗಾಗಲೇ ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ, ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಿದೆ. ಪದವೀಧರರ ಕ್ಷೇತ್ರಕ್ಕೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್‌ ಅವರ ಆಯ್ಕೆ ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಶಿಕ್ಷಕರ ಕ್ಷೇತ್ರದಿಂದ ಮೂರನೇ ಬಾರಿ ಕಣಕ್ಕೆ ಇಳಿಯಲು ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವರಿಷ್ಠರ ಮನವೊಲಿಸುವ ಪ್ರಯತ್ನದಲ್ಲಿ ಇದ್ದಾರೆ. 2006 ಮತ್ತು 2012ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.