ADVERTISEMENT

ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 7:15 IST
Last Updated 20 ಜನವರಿ 2011, 7:15 IST

ಶಿವಮೊಗ್ಗ: ಮದ್ಯ ಮಾರಾಟ ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಭದ್ರಾವತಿ ತಾಲ್ಲೂಕಿನ ಹಿರಿಯೂರು ಗ್ರಾಮಸ್ಥರು ಹಾಗೂ ವಿವಿಧ ಮಹಿಳಾ ಸಂಘಟನೆಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಗ್ರಾಮದ ಬಹಳಷ್ಟು ಅಂಗಡಿ, ಮನೆ ಹಾಗೂ ಹೋಟೆಲ್‌ಗಳಲ್ಲಿ ಕಳಪೆ ಮದ್ಯ ಮಾರಾಟವಾಗುತ್ತಿದ್ದು ಬಡಕುಟುಂಬಗಳು, ಕೂಲಿಕಾರ್ಮಿಕರು ಹಾಗೂ ಕೃಷಿಕರು ಇದನ್ನೇ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಡಿದದ್ದನ್ನೆಲ್ಲಾ ಮದ್ಯ ಸೇವನೆಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಮದ್ಯ ಸೇವನೆಯಿಂದ ಕುಟುಂಬಗಳ ನಿರ್ವಹಣೆಯೂ ದುಸ್ತರವಾಗಿದೆ. ಆದ್ದರಿಂದ ತುರ್ತಾಗಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಇದೇ ಬೇಡಿಕೆ ಇಟ್ಟುಕೊಂಡು ಮಹಿಳೆಯರು, ಗ್ರಾಮಸ್ಥರು ಸೇರಿ ಹಿರಿಯೂರಿನಲ್ಲಿ ಜ. 10ರಂದು ಪ್ರತಿಭಟನೆ ನಡೆಸಿದ್ದೆವು. ಊರಿನ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿ, ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡ ನೀಡಲಾಯಿತು. ಆದರೆ, ಇದುವರೆಗೂ ಗ್ರಾಮದಲ್ಲಿ ಮದ್ಯ ಮಾರಾಟ ನಿಯಂತ್ರಣಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೇ, ಜ. 17ರಂದು ಮತ್ತೆ ಗ್ರಾಮದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿದರೂ ಈವರೆಗೂ ಸಂಬಂಧಪಟ್ಟವರು ಸ್ಪಂದಿಸಿಲ್ಲ. ಈ ಹೋರಾಟಕ್ಕೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರೆಲ್ಲರೂ ನಿರಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಅಂತೋನಿ, ಎಚ್.ಎಸ್. ಶಾಂತಾಬಾಯಿ, ಸುಧಾ, ರೂಪಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.