ADVERTISEMENT

ಮಧ್ಯವರ್ತಿ ಕಾಟ ತಡೆಗೆ ಪ್ರಚಾರ ಸಹಕಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಶಿವಮೊಗ್ಗ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಜನಸಾಮಾನ್ಯರು ಹಾಗೂ ರೈತಾಪಿ ವರ್ಗಕ್ಕೆ ಮನವರಿಕೆ ಮಾಡಿಕೊಟ್ಟಲ್ಲಿ ಮಧ್ಯವರ್ತಿಗಳ ಕಾಟ ತಡೆಯಬಹುದಾಗಿದೆ ಎಂದು ಸಂಸತ್ ಸದಸ್ಯ ಬಿ. ವೈ. ರಾಘವೇಂದ್ರ ಅಭಿಪ್ರಾಯಪಟ್ಟರು. ನಗರದ ನೆಹರು ಕ್ರೀಡಾಂಗಣದಲ್ಲಿ ವಾರ್ತಾ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ಬಹು ಮಾಧ್ಯಮಗಳ ತೀವ್ರ ಪ್ರಚಾರಾಂದೋಲನಕ್ಕೆ ಅವರು ಹಸಿರು ನಿಶಾನೆ ತೋರಿ ಮಾತನಾಡಿದರು.

ಶೇ. 3ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ, ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಒಂದಿಲ್ಲೊಂದು ಉಪಯುಕ್ತ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡಿರುವ ಈ ಆಂದೋಲನ ಉತ್ತಮ ಪರಿಕಲ್ಪನೆ ಎಂದರು.

ಶಾಸಕ ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ವಾರ್ತಾ ಇಲಾಖೆಯ ಬೆಂಗಳೂರು ಗ್ರಾಮಾಂತರ ವಿಭಾಗದ ಉಪನಿರ್ದೇಶಕ ಡಿ. ಪಿ. ಮುರಳೀಧರ್, ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕ ದೇವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು. ಆಂದೋಲನದಲ್ಲಿ ವಾರ್ತಾ ಇಲಾಖೆಯ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲಾ ಕ್ಷೇತ್ರ ಪ್ರಚಾರ ಘಟಕಗಳು ಶಿವಮೊಗ್ಗ ಹಾಗೂ ಶಿಕಾರಿಪುರ ತಾಲ್ಲೂಕುಗಳ ಆಯ್ದ 100 ಗ್ರಾಮಗಳಿಗೆ ತೆರಳಿ ಛಾಯಾಚಿತ್ರ, ವಸ್ತುಪ್ರದರ್ಶನ, ಸಂಗೀತ, ನಾಟಕ ಹಾಗೂ ಚಲನಚಿತ್ರ ಪ್ರದರ್ಶನ ನೀಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.